ವಾರ್ತಾಭಾರತಿ ವರದಿ ಫಲಶ್ರುತಿ: ಕುಂಡ ಕೊರಗರಿಗೆ ಕೊನೆಗೂ ದೊರೆಯಿತು ಸೂರು
ಬೆಳ್ತಂಗಡಿ, ಎ.27: ಚಾರ್ಮಾಡಿಯ ಗಾಂಧಿನಗರ ಕೊರಗರ ಕಾಲನಿಯಲ್ಲಿ ಒಂದು ದಶಕದಿಂದ ಟರ್ಪಾಲಿನಡಿಯಲ್ಲಿ ಮಳೆ, ಗಾಳಿ, ಚಳಿಯನ್ನು ಸಹಿಸುತ್ತಾ ಬದುಕನ್ನು ನಡೆಸುತ್ತಿದ್ದ ಕುಂಡ ಕೊರಗ ಮತ್ತು ಕುಟುಂಬಕ್ಕೆ ಕೊನೆಗೂ ಸ್ವಂತ ಮನೆ ಪ್ರಾಪ್ತಿಯಾಗಿದೆ. ಕುಂಡ ಕೊರಗರ ಸಂಕಷ್ಟದ ಬಗ್ಗೆ "ವಾರ್ತಾ ಭಾರತಿ" ಪ್ರಕಟಿಸಿದ್ದ ಸಚಿತ್ರ ವರದಿಯ ಬೆನ್ನಲ್ಲೇ ಸಮಾಜಕಲ್ಯಾಣ ಇಲಾಖೆ ಹಾಗೂ ಚಾರ್ಮಾಡಿ ಗ್ರಾಪಂ ಮನೆ ನಿರ್ಮಾಣಕ್ಕೆ ಮುಂದಾಗಿತ್ತು. ಇದೀಗ ಮನೆ ಕಾಮಗಾರಿ ಕೊನೆಯ ಹಂತದಲ್ಲಿದೆ. ಮಳೆಗಾಲ ಆರಂಭವಾಗುವುದಕ್ಕಿಂತ ಮೊದಲೇ ಕುಂಡ ಕೊರಗ ಅವರು ಹೊಸ ಮನೆಯಲ್ಲಿ ಬದುಕನ್ನು ಆರಂಭಿಸಲಿದ್ದಾರೆ.
ಕುಸಿದು ಬೀಳಲು ಸಿದ್ಧವಾಗಿದ್ದ ಜೋಪಡಿಯಲ್ಲಿ ಬದುಕನ್ನು ನಡೆಸುತ್ತಿರುವ ಕುಂಡ ಕೊರಗ ಅವರ ಬದುಕಿನ ದುಸ್ಥಿತಿಯ ಬಗ್ಗೆ ವಿಸ್ತತ ವರದಿಯನ್ನು ಜುಲೈ 15ರಂದು ‘ವಾರ್ತಾಭಾರತಿ’ ಪ್ರಕಟಿಸಿತ್ತು. ಕೂಡಲೇ ಎಚ್ಚೆತ್ತುಕೊಂಡ ಸಮಾಜ ಕಲ್ಯಾಣ ಇಲಾಖೆ ಅವರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿ, ಎರಡು ಲಕ್ಷ ರೂ. ಅನುದಾನವನ್ನೂ ಒದಗಿಸಿತ್ತು. ಚಾರ್ಮಾಡಿ ಗ್ರಾಪಂ ಅಭಿವೃದ್ದಿ ಅಧಿಕಾರಿ ಪ್ರಕಾಶ ಶೆಟ್ಟಿ ನೊಚ್ಚ ಅವರು ನೇತೃತ್ವ ವಹಿಸಿ ಮನೆ ಕಾಮಗಾರಿಯನ್ನು ಸ್ಥಳೀಯ ಗುತ್ತಿಗೆದಾರರ ಸಹಕಾರದಿಂದ ಪೂರ್ಣಗೊಳಿಸಿದ್ದಾರೆ.
ಇದೀಗ ಮನೆ ಕಾಮಗಾರಿಗೆ ಸುಮಾರು ಮೂರುವರೆ ಲಕ್ಷ ರೂ. ವೆಚ್ಚ ತಗಲಿದ್ದು, ಇದರಲ್ಲಿ ಎರಡು ಲಕ್ಷ ಸಮಾಜ ಕಲ್ಯಾಣ ಇಲಾಖೆಯಿಂದ ಬಂದಿದ್ದು, ಇಪ್ಪತ್ತೈದು ಸಾವಿರ ರೂ.ಗಳನ್ನು ಗ್ರಾಪಂ ನೀಡಿದೆ. ಅಲ್ಲದೆ ಉದ್ಯೋಗ ಖಾತರಿ ಯೋಜನೆಯಲ್ಲಿ ಇಪ್ಪತ್ತು ಸಾವಿರ ರೂ. ನೀಡಲಾಗಿದೆ. ಒಂದು ಲಕ್ಷ ರೂ. ಕೊರತೆಯಿದ್ದು, ಅದನ್ನು ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆಯನ್ನು ಕೋರಲಾಗಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ತಿಳಿಸಿದ್ದಾರೆ.