×
Ad

ಉಡುಪಿ: ಸಿಇಟಿ ಪರೀಕ್ಷೆಗೆ 4992 ವಿದ್ಯಾರ್ಥಿಗಳು ಭಾಗಿ

Update: 2017-04-27 22:24 IST

ಉಡುಪಿ, ಎ.27: ಮುಂದಿನ ಮೇ 2 ಮತ್ತು 3ರಂದು ಉಡುಪಿ ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಸಿಇಟಿ ಪರೀಕ್ಷೆಗಳಲ್ಲಿ ಒಟ್ಟು 4,992 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಬಿ.ನಾಯಕ್ ತಿಳಿಸಿದ್ದಾರೆ.

ಉಡುಪಿಯಲ್ಲಿ 6, ಕುಂದಾಪುರದಲ್ಲಿ ಮೂರು ಹಾಗೂ ಕಾರ್ಕಳದಲ್ಲಿ ಎರಡು ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಎರಡು ದಿನ ಪರೀಕ್ಷೆ ನಡೆಯಲಿವೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಈಗಾಗಲೇ ಪರೀಕ್ಷಾ ಪೂರ್ವ ಸಿದ್ಧತೆ ಕಾರ್ಯಗಳು ನಡೆದಿದ್ದು, ವಿದ್ಯಾರ್ಥಿಗಳಿಗೆ ಈಗಾಗಲೇ ಮಾಹಿತಿಗಳನ್ನು ನೀಡಲಾಗಿದೆ ಎಂದರು.

ಮೇ 2ರ ಮಂಗಳವಾರ ಬೆಳಗ್ಗೆ 10:30ರಿಂದ 11:50ರವರೆಗೆ ಜೀವಶಾಸ್ತ್ರ, ಅಪರಾಹ್ನ 2:30ರಿಂದ 3:50ರವರೆಗೆ ಗಣಿತ, ಮೇ 3ರ ಬುಧವಾರ ಬೆಳಗ್ಗೆ 10:30ರಿಂದ 11:50ರವರೆಗೆ ಭೌತಶಾಸ್ತ್ರ ಹಾಗೂ ಅಪರಾಹ್ನ 2:30ರಿಂದ 3:50ರವರೆಗೆ ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

ವಿದ್ಯಾರ್ಥಿಗಳಿಗೆ ಸೂಚನೆ: ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭಗೊಳ್ಳುವ ಮೊದಲನೇ ಬೆಲ್ ಆದ ತಕ್ಷಣ (ಬೆಳಗ್ಗೆ 10:15ಕ್ಕೆ, ಅಪರಾಹ್ನ 2:14ಕ್ಕೆ) ಪರೀಕ್ಷಾ ಕೊಠಡಿ ಪ್ರವೇಶಿಸಿ ತಮ್ಮ ನಿಗದಿತ ಆಸನಗಳಲ್ಲಿ ಕುಳಿತುಕೊಳ್ಳಬೇಕು. ವಿಳಂಬವಾಗಿ ಬರುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಆರ್.ಬಿ.ನಾಯಕ್ ತಿಳಿಸಿದ್ದಾರೆ.

ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಯಾವುದೇ ಆಧುನಿಕ ಇಲೆಕ್ಟ್ರಾನಿಕ್ಸ್ ಉಪಕರಣ, ಮೊಬೈಲ್ ಫೋನ್, ಬ್ಲೂಟೂಥ್, ಸ್ಲೈಡ್ ರೋಲ್ಸ್, ಕ್ಯಾಲ್‌ಕ್ಯೂಲೇಟರ್, ವಯರ್‌ಲೆಸ್‌ಸೆಟ್, ಪೇಪರ್‌ಚೀಟಿ, ಪುಸ್ತಕಗಳನ್ನು ತರುವುದನ್ನು ನಿಷೇಧಿಸಲಾಗಿದೆ.

ಪ್ರವೇಶ ಪತ್ರದ ಜೊತೆಗೆ ಕಡ್ಡಾಯವಾಗಿ ಮಾನ್ಯತೆ ಇರುವ ಗುರುತು ಚೀಟಿ (ಕಾಲೇಜಿನ ಗುರುತುಚೀಟಿ, ಬಸ್‌ಪಾಸ್, ಡಿಎಲ್, ಪಾಸ್‌ಪೋರ್ಟ್, ಆಧಾರಕಾರ್ಡ್, ಪಾನ್‌ಕಾರ್ಡ್ ಇತ್ಯಾದಿ)ಯನ್ನು ತರಬೇಕು.

ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಹೀಗಿದೆ. ಉಡುಪಿ: ವಿದ್ಯೋದಯ ಪಿಯು ಕಾಲೇಜು ಉಡುಪಿ (416), ಸರಕಾರಿ ಬಾಲಕಿಯರ ಪಿಯು ಕಾಲೇಜು ಉಡುಪಿ (432), ಪೂರ್ಣಪ್ರಜ್ಞ ಪಿಯು ಕಾಲೇಜು ಉಡುಪಿ (432), ಮಣಿಪಾಲ ಪಿಯು ಕಾಲೇಜು ಮಣಿಪಾಲ (432), ಎಂಜಿಎಂ ಪಿಯು ಕಾಲೇಜು ಉಡುಪಿ (432), ಸರಕಾರಿ ಪಿಯು ಕಾಲೇಜು, ಉಡುಪಿ (368).

ಕುಂದಾಪುರ: ಸರಕಾರಿ ಪಿಯು ಕಾಲೇಜು ಕುಂದಾಪುರ (512), ಆರ್.ಎನ್.ಶೆಟ್ಟಿ ಪಿಯು ಕಾಲೇಜು ಕುಂದಾಪುರ (496), ಭಂಡಾರ್‌ಕಾರ್ಸ್‌ ಪಿಯು ಕಾಲೇಜು ಕುಂದಾಪುರ (480). ಕಾರ್ಕಳ: ಸರಕಾರಿ ಪಿಯು ಕಾಲೇಜು ಕಾರ್ಕಳ (464), ಶ್ರೀಭುವನೇಂದ್ರ ಪಿಯು ಕಾಲೇಜು ಕಾರ್ಕಳ (520).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News