×
Ad

ಯುವತಿಗೆ ಅಪರೂಪದ, ಅತಿಸೂಕ್ಷ್ಮಶಸ್ತ್ರಚಿಕಿತ್ಸೆ ನಡೆಸಿದ ಕಣಚೂರು ಆಸ್ಪತ್ರೆಯ ವೈದ್ಯರ ತಂಡ

Update: 2017-04-28 12:43 IST

ಉಳ್ಳಾಲ, ಎ.28: ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯರ ತಂಡವು ಯುವತಿಯೋರ್ವಳಿಗೆ ಅಪರೂಪದ ಹಾಗೂ ಅತಿಸೂಕ್ಷ್ಮ ಶಸ್ತ್ರಚಿಕಿತ್ಸೆಯನ್ನು ನಡೆಸಿ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯರ ತಂಡ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಆಸ್ಪತ್ರೆಯ ವೈದ್ಯರು, ಮೂಡುಬಿದಿರೆಯ 33ರ ಹರೆಯದ ಯುವತಿಯೊಬ್ಬರ ಕಣ್ಣುಗಳು 60 ಮಿಲಿ ಮೀಟರ್ ಅಂತರವಿದ್ದು, ಇದು ಜನ್ಮತಃ ಬಂದ ಸಮಸ್ಯೆಯಾಗಿತ್ತು. ಕಣ್ಣುಗಳು ಸಾಮಾನ್ಯ ಅಂತರದಲ್ಲಿ ಇರದಿದ್ದುದರಿಂದ ಆಕೆಯ ಮುಖದ ವಿನ್ಯಾಸವೂ ಇತರರಿಗಿಂತ ಭಿನ್ನವಾಗಿದ್ದು, ಇದರಿಂದ ಆಕೆಯ ವಿವಾಹವೂ ವಿಳಂಬವಾಗಿತ್ತು. ಇದರಿಂದ ಯುವತಿಯ ಮನೆಮಂದಿ ಮಾನಸಿಕವಾಗಿ ನೊಂದು, ಮಗಳ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದರು. ಆಧುನಿಕ ವೈದ್ಯಕೀಯ ತಂತ್ರಜ್ಞರಿಂದ ಸರಿಪಡಿಸಲು ಸಾಧ್ಯವೇ ಎನ್ನುವ ಅನುಮಾನ ಹಾಗೂ ಲಕ್ಷಾಂತರ ರೂ. ವೆಚ್ಚವಾಗುವ ಭೀತಿಯಿಂದ ಯುವತಿ ಮನೆಯಲ್ಲಿಯೇ ಉಳಿದಿದ್ದಳು.

ಇತ್ತೀಚೆಗೆ ಆಕೆಯ ಹೆತ್ತವರು ನಾಟೆಕಲ್ ಕಣಚೂರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ತಂಡದ ಜತೆಗೆ ಮಾತುಕತೆ ನಡೆಸಿದಾಗ, ಉಳಿದ ಆಸ್ಪತ್ರೆಗಳಲ್ಲಿ ತಗಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಆಸ್ಪತ್ರೆಯ ವೈದ್ಯರು ಭರವಸೆ ನೀಡಿದ ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಯುವತಿಯ ಪರಿಶೀಲನೆ ನಡೆಸಿದ ವೈದ್ಯರು ಅತಿಸೂಕ್ಷ್ಮ ಹಾಗೂ ಅಪರೂಪದ ಶಸ್ತ್ರಚಿಕಿತ್ಸೆಯಾಗಿರುವುದರಿಂದ ಸೂಪರ್ ಸ್ಪೆಷಾಲಿಟಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದು ಆಸ್ಪತ್ರೆಯ ಮೆಕ್ಸಿಲೊಫೇಷಿಯಲ್ ಸರ್ಜನ್ ಗಳಾದ ಡಾ.ಮುಸ್ತಫಾ ಕೆ. ಮತ್ತವರ ತಂಡ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಯಿತು.

ನಿರಂತರ 10 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ಯುವತಿಯ ಕಣ್ಣುಗಳ ನಡುವೆ ಇದ್ದ ಹೆಚ್ಚುವರಿ ಎಲುಬುಗಳನ್ನು ಕತ್ತರಿಸಿ, ತುಂಡರಿಸಿದ ಎಲುಬುಗಳಿಗೆ ಸುಮಾರು 10 ರಷ್ಟು ಟೈಟೇನಿಯಂನ ಪ್ಲೇಟ್ ಗಳನ್ನು ಅಳವಡಿಸಿ ಅಗಲವಾಗಿ ಕಾಣುತ್ತಿದ್ದ ಮುಖವನ್ನು ಸಾಮಾನ್ಯರಂತೆ ಕಾಣುವ ಹಾಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣ ಬಲು ಅಪರೂಪವಾಗಿದ್ದು, 700ರಲ್ಲಿ 1 ಮಂದಿಗೆ ಮಾತ್ರ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇಂತಹ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಬೆಂಗಳೂರಿನಿಂದ ಯುವತಿಯ ಮುಖದ ಮಾದರಿಯನ್ನು ತಯಾರಿಸಿ, ಅದರ ಮೂಲಕ ರೂಪುರೇಷೆಯನ್ನು ನಡೆಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾದ ನಂತರ ಆಕೆಯ ಆರೋಗ್ಯದ ಏರುಪೇರುಗಳನ್ನು ಪರಿಶೀಲಿಸಿ, ಶಸ್ತ್ರಚಿಕಿತ್ಸೆಗೆ ಸಮರ್ಥಳೆಂದು ದೃಢಪಟ್ಟ ನಂತರವಷ್ಟೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರ ತಂಡ ಹೇಳಿದೆ.

ಶಸ್ತ್ರಚಿಕಿತ್ಸೆಯಲ್ಲಿ ಸರ್ಜನ್ ಗಳಾದ ಡಾ.ಶ್ರೇಯಸ್ ಸೊರಕೆ, ಡಾ.ಆಪ್ರೀನ್ ಅಫ್ತಾಬ್, ಡಾ.ಪ್ರಶಾಂತ್.ಎಲ್. ಮೋನಿಸ್, ಡಾ.ಲಿಡಾ ಫಿಲಿಪ್, ನರಶಸ್ತ್ರಚಿಕಿತ್ಸಕರಾದ ಡಾ.ರಜನೀಶ್ ಮಿಶ್ರಾ, ನೇತ್ರಶಾಸ್ತ್ರಜ್ಞ ಡಾ.ಬದರೀನಾಥ್ ತಲ್ವಾರ್, ಅರಿವಳಿಕೆ ತಜ್ಞರಾದ ಡಾ.ಅಝೀಂ, ಡಾ.ಮೇಘ ಭಾಗವಹಿಸಿದ್ದರು ಎಂದು ಡಾ.ಮುಸ್ತಫಾ ಕೆ. ಮಾಹಿತಿ ನೀಡಿದರು.

ಸುದ್ಧಿಗೋಷ್ಠಿಯಲ್ಲಿ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುರ್ರಹ್ಮಾನ್ ಕಣಚೂರು, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರೋಹನ್ ಮೋನಿಸ್, ವೈದ್ಯಕೀಯ ಅಧೀಕ್ಷಕ ಡಾ.ದೇವಿಪ್ರಸಾದ್, ಡೀನ್. ಡಾ.ಎಚ್.ಎಸ್ ವಿರೂಪಾಕ್ಷ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News