×
Ad

ಮೆರವಣಿಗೆಯಲ್ಲಿ ಕುದುರೆಯ ಮೇಲೆ ಕುಳಿತಿದ್ದ ದಲಿತ ವರನಿಗೆ ಬಿಯರ್ ಬಾಟ್ಲಿಗಳಿಂದ ಹಲ್ಲೆ

Update: 2017-04-28 18:38 IST
ಸಾಂದರ್ಭಿಕ ಚಿತ್ರ

ಜೈಪುರ,ಎ.28: ತನ್ನ ಮದುವೆ ಮೆರವಣಿಗೆಯಲ್ಲಿ ಕುದುರೆಯ ಮೇಲೆ ಕುಳಿತುಕೊಂಡು ಸಾಗುತ್ತಿದ್ದ ದಲಿತ ಮದುಮಗನಿಗೆ ಮೇಲ್ಜಾತಿಗಳ ಜನರು ಬಿಯರ್ ಬಾಟ್ಲಿಗಳಿಂದ ಹಲ್ಲೆ ನಡೆಸಿದ ಘಟನೆ ಉದಯಪುರ ಜಿಲ್ಲೆಯ ಝಲೋ ಕಾ ದಾನಾ ಗ್ರಾಮದಲ್ಲಿ ನಡೆದಿದೆ. ಇಲ್ಲೆಲ್ಲ ಕುದುರೆ ಸವಾರಿ ಮೇಲ್ಜಾತಿಗಳ ಹಕ್ಕು ಎಂದೇ ಪರಿಗಣಿಸಲಾಗಿದೆ.

ತನ್ನ ಮಗ ಕೈಲಾಷ್ ಮೇಘ್ವಾಲ್‌ನ ಮದುವೆ ಮೆರವಣಿಗೆ ಸಾಗುತ್ತಿದ್ದಾಗ ಬಿಯರ್ ಬಾಟ್ಲಿ, ಕಬ್ಬಿಣದ ಸರಳುಗಳು ಮತ್ತು ಇತರ ಮಾರಕಾಸ್ತ್ರಗಳನ್ನು ಹೊಂದಿದ್ದ ಸುಮಾರು ಐದಾರು ಜನರ ಗುಂಪು ತಡೆದು ನಿಲ್ಲಿಸಿತ್ತು. ಬಳಿಕ ಕೈಲಾಷ್‌ನನ್ನು ಬಲವಂತದಿಂದ ಕುದುರೆಯಿಂದ ಕೆಳಗಿಳಿಸಿದ ಅವರು ಬಿಯರ್ ಬಾಟ್ಲಿಗಳಿಂದ ಥಳಿಸಿ ರಸ್ತೆಯಲ್ಲಿ ಸ್ವಲ್ಪ ದೂರ ಎಳೆದೊಯ್ದಿದ್ದರು ಎಂದು ಕುಕರಾಮ್ ಮೇಘ್ವಾಲ್ ಸುದ್ದಿಸಂಸ್ಥೆಗೆ ತಿಳಿಸಿದರು.

ದಾಳಿಕೋರರ ಜೊತೆಯಲ್ಲಿದ್ದ ಕೆಲವು ಮಹಿಳೆಯರೂ ಮೆರವಣಿಗೆಯಲ್ಲಿದ್ದ ಮಹಿಳೆಯರನ್ನು ಥಳಿಸಲು ಪ್ರಯತ್ನಿಸಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದರು.

ದಾಳಿಕೋರರು ರಾಜಪೂತ್ ಸಮುದಾಯಕ್ಕೆ ಸೇರಿದವರಾಗಿದ್ದು, ತನ್ನ ಗ್ರಾಮದಲ್ಲಿ ಪರಿಶಿಷ್ಟರು ಮದುವೆ ಮೆರವಣಿಗೆಯಲ್ಲಿ ಕುದುರೆಯನ್ನು ಹತ್ತಿ ಸಾಗುವಂತಿಲ್ಲ ಮತ್ತು ಇದೇ ಕಾರಣದಿಂದ ತನ್ನ ಮಗನ ಮೇಲೆ ಹಲ್ಲೆ ನಡೆದಿದೆ ಎಂದು ಅವರು ತಿಳಿಸಿದರು.

 ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಮೇಘ್ವಾಲ್ ಕುಟುಂಬಕ್ಕೆ ರಕ್ಷಣೆಯನ್ನೊದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News