ಭದ್ರತಾ ಪಡೆಗಳು ನಡೆಸಿದ ಲೈಂಗಿಕ ದೌರ್ಜನ್ಯಕ್ಕೆ ಸುಕ್ಮಾ ದಾಳಿಯ ಮೂಲಕ ಪ್ರತ್ಯುತ್ತರ : ನಕ್ಸಲರ ಹೇಳಿಕೆ
ರಾಯ್‌ಪುರ, ಎ.28: ಬುಡಕಟ್ಟು ಮಹಿಳೆಯರ ಮೇಲೆ ಭದ್ರತಾ ಪಡೆಗಳು ನಡೆಸಿರುವ ಲೈಂಗಿಕ ದೌರ್ಜನ್ಯ ಮತ್ತು ಗ್ರಾಮಸ್ಥರನ್ನು ಹತ್ಯೆ ಮಾಡಿರುವುದಕ್ಕೆ ಸುಕ್ಮಾ ದಾಳಿಯ ಮೂಲಕ ಪ್ರತ್ಯುತ್ತರ ನೀಡಿರುವುದಾಗಿ ನಿಷೇಧಿತ ಮಾವೋವಾದಿ ಕಮ್ಯುನಿಸ್ಟ್ ಪಕ್ಷದ ದಂಡಕಾರಣ್ಯ ವಿಶೇಷ ವಲಯ ಸಮಿತಿ (ಡಿಕೆಎಸ್‌ಝೆಡ್‌ಸಿ ) ಬಿಡುಗಡೆ ಮಾಡಿರುವ ಧ್ವನಿ ಮುದ್ರಿಕೆಯಲ್ಲಿ ತಿಳಿಸಲಾಗಿದೆ.
ಮಂಗಳವಾರ ನಕ್ಸಲರು ನಡೆಸಿದ ದಾಳಿಯಲ್ಲಿ 25 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹೊಣೆಯನ್ನು ಹೊತ್ತಿರುವ ದಂಡಕಾರಣ್ಯ ವಿಶೇಷ ವಲಯ ಸಮಿತಿಯ ವಕ್ತಾರ ‘ವಿಕಲ್ಪ್’, ಸಂಘಟನೆಯ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ನಡೆಸಿದ ದಾಳಿ ಯಶಸ್ವಿಯಾಗಿದೆ. ಈ ಯಶಸ್ಸು ಸಾಧಿಸಲು ಸಹಕರಿಸಿದ ಪಿಎಲ್‌ಜಿಎ ಸದಸ್ಯರು, ಕಮಾಂಡರ್‌ಗಳು, ದಂಡಕಾರಣ್ಯ ಪ್ರದೇಶದ ಜನತೆಯನ್ನು ಅಭಿನಂದಿಸುತ್ತೇವೆ. ಇದು 2017ರ ಮಾರ್ಚ್‌ನಲ್ಲಿ ಭೆಜ್ಜಿಯಲ್ಲಿ ಸಿಆರ್‌ಪಿಎಫ್ ಪಡೆಯ ಮೇಲೆ ನಡೆಸಿದ ದಾಳಿಯ ಮುಂದುವರಿದ ಭಾಗವಾಗಿದೆ. ಜನವಿರೋಧಿ ನೀತಿಗಳನ್ನು ಸೋಲಿಸಲು ಮತ್ತು ಜನಪರವಾದ ಹೋರಾಟವನ್ನು ಮುನ್ನಡೆಸುವ ಉದ್ದೇಶದಿಂದ ನಡೆಸಲಾದ ಪ್ರತೀಕಾರದ ದಾಳಿ ಇದಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಬುಡಕಟ್ಟು ಮಹಿಳೆಯರು ಮತ್ತು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಭದ್ರತಾ ಪಡೆಗಳಿಂದ ಅನುಭವಿಸುತ್ತಿರುವ ನರಕಯಾತನೆಯಿಂದ ಬುಡಕಟ್ಟು ಜನರನ್ನು ಪಾರುಗೊಳಿಸುವ ಕ್ರಮದ ಅಂಗವಾಗಿ ಸುಕ್ಮಾ ದಾಳಿ ನಡೆಸಲಾಗಿದೆ ಎಂದಿರುವ ‘ವಿಕಲ್ಪ್’, ಇಲ್ಲಿ ಸರಕಾರ ನಡೆಸುತ್ತಿರುವ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ತೀವ್ರ ವಿರೋಧ ಸೂಚಿಸಿದ್ದಾರೆ. ರಸ್ತೆ ಅಭಿವೃದ್ಧಿ ಕಾರ್ಯದ ನೆಪ ಹೇಳಿ ಸ್ಥಳೀಯರನ್ನು ಲೂಟಿ ಮಾಡುವ ಯೋಜನೆ ಇದಾಗಿದೆ ಎಂದು ಟೀಕಿಸಿದ್ದಾರೆ.
ಆದರೆ ಸಿಆರ್‌ಪಿಎಫ್ ಯೋಧರ ಮೃತದೇಹವನ್ನು ನಕ್ಸಲರು ವಿರೂಪಗೊಳಿಸಿದ್ದಾರೆ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ.