ಉಡುಪಿ ಧರ್ಮಪ್ರಾಂತದ ಕ್ರೈಸ್ತ ಸ್ತ್ರೀ ಸಂಘಟನೆಯ 5ನೆ ವಾರ್ಷಿಕೋತ್ಸವ
ಉಡುಪಿ, ಎ.28: ಮಹಿಳೆಯರು ತಮಗೆ ಲಭಿಸಿದ ನಾಯಕತ್ವದ ಅವಕಾಶವನ್ನು ಬಿಟ್ಟುಕೊಡದೆ ಸಮಾಜದಲ್ಲಿರುವ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಲು ಪ್ರಯತ್ನಿಸಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕನ್ನರ್‌ಪಾಡಿ ಸೈಂಟ್ ಮೇರಿಸ್ ಶಾಲಾ ಆವರಣದಲ್ಲಿ ಜರಗಿದ ಉಡುಪಿ ಧರ್ಮಪ್ರಾಂತದ ಕ್ರೈಸ್ತ ಸ್ತ್ರೀ ಸಂಘಟನೆಯ 5ನೆ ವಾರ್ಷಿಕೋತ್ಸವ ಹಾಗೂ ಧರ್ಮಪ್ರಾಂತ ಮಟ್ಟದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕ್ರೈಸ್ತ ಸಮುದಾಯದಲ್ಲಿ ಯುವ ಸಂಘಟನೆಯಷ್ಟೇ ಬಲಿಷ್ಟವಾಗಿ ಮಹಿಳಾ ಸಂಘಟನೆ ಕಾರ್ಯಾಚರಿಸುತ್ತಿದ್ದು, ಎರಡು ಸಂಘಟನೆಗಳು ಜೊತೆಯಾಗಿ ಸೇರಿದಾಗ ಸಂಘಟನೆ ಇನ್ನಷ್ಟು ಬಲಿಷ್ಟವಾಗಲು ಸಾಧ್ಯವಿದೆ. ಮಹಿಳೆಯರು ತಮ್ಮ ಮನೆಯಿಂದ ಹೊರಬಂದು ಸ್ವಸಹಾಯ ಸಂಘಟನೆ, ರಾಜಕೀಯದಲ್ಲಿ ಕೂಡ ಸಾಧನೆ ಮಾಡುವಂತಾಗಬೇಕು. ರಾಜ್ಯ ಸರಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ಅದನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಕೇವಲ ಮಹಿಳೆಯರಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಯಾವ ವ್ಯಕ್ತಿ ಒಂದು ಸ್ಪಷ್ಟ ಯೋಜನೆ ರೂಪಿಸಲು ಸೋಲುತ್ತಾನೋ, ಆತ ಸೋಲೊಪ್ಪುವುದಕ್ಕಾಗಿಯೇ ಯೋಜನೆಯನ್ನು ರೂಪಿಸುತ್ತಾನೆ. ಅಂತಹ ಯೋಜನೆ ಎಂದಿಗೂ ಯಶಸ್ವಿ ಯಾಗುವುದಿಲ್ಲ. ಅಲ್ಲದೆ ಯಾವುದೇ ಪ್ರಗತಿಗೂ ಕೂಡ ಕಾರಣವಾಗುವುದಿಲ್ಲ ಎಂದರು.
ಉಡುಪಿ ಧರ್ಮಪ್ರಾಂತದಲ್ಲಿ ಕ್ರೈಸ್ತ ಮಹಿಳಾ ಸಂಘಟನೆ ಕಳೆದ 5 ವರ್ಷಗಳಲ್ಲಿ ವಿಶೇಷ ಸಾಧನೆಯನ್ನು ತೋರಿದ್ದು, ಇಲ್ಲಿಗೆ ಇದನ್ನು ನಿಲ್ಲಿಸದೆ ಇನ್ನಷ್ಟು ಸಾಧನೆ ಮಾಡುವತ್ತ ಮುನ್ನುಗಬೇಕು. ಕೆಥೊಲಿಕ್ ಮಹಿಳೆಯರು ಇನ್ನಷ್ಟು ಸಂಘಟಿತರಾಗುವುದಕ್ಕಾಗಿ ಹೆಚ್ಚಿನ ಸದಸ್ಯತ್ವ ಅಭಿಯಾನವನ್ನು ನಡೆಸಬೇಕು. ಮುಂದಿನ ದಿನಗಳಲ್ಲಿ ಧರ್ಮಪ್ರಾಂತದ ಕೆಥೊಲಿಕ್ ಮಹಿಳೆಯರ ಸ್ವಂತ ಬ್ಯಾಂಕ್ ಆರಂಭಿಸುವ ಕುರಿತು ಚಿಂತನೆ ನಡೆಸಬೇಕು. ಮಹಿಳೆಯರು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿ ಸಮಾಜದ ಮುಖ್ಯವಾಹಿನಿ ಯಲ್ಲಿ ಅವರ ನಾಯಕತ್ವ ಎದ್ದು ಕಾಣಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜಕೀಯ, ಸಾಮಾಜಿಕ ಸೇವೆಗಳಲ್ಲಿ ಸಾಧನೆ ಮಾಡಿದ ಸಮಾಜದ ಮಹಿಳೆಯರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಉಡುಪಿ ಧರ್ಮಪ್ರಾಂತದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ಉಡುಪಿ ವಲಯ ಪ್ರಧಾನ ಧರ್ಮಗುರು ವಂ.ಫ್ರೆಡ್ ಮಸ್ಕರೇನ್ಹಸ್, ಕಟೀಲು ಚರ್ಚಿನ ಧರ್ಮಗುರು ವಂ.ರೊನಾಲ್ಡ್ ಕುಟಿನ್ಹಾ, ಸಂಘಟನೆಯ ನಿರ್ದೇಶಕಿ ಸಿಸ್ಟರ್ ಟ್ರೀಜಾ ಮಾರ್ಟಿಸ್ ಉಪಸ್ಥಿತರಿದ್ದರು.
ಸಂಘಟನೆಯ ಅಧ್ಯಕ್ಷೆ ಐರಿನ್ ಪಿರೇರಾ ಸ್ವಾಗತಿಸಿ, ಕಾರ್ಯದರ್ಶಿ ಸಿಂಥಿಯಾ ಡಿಸೋಜ ವರದಿ ಮಂಡಿಸಿದರು. ಉಪಾಧ್ಯಕ್ಷೆ ಬೆನಡಿಕ್ಟಾ ವಂದಿಸಿ ಜುಡಿತ್ ಫೆರ್ನಾಂಡಿಸ್ ಮತ್ತು ವಿನಯ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.
ಭತ್ತ ಕುಟ್ಟಿ ಉದ್ಘಾಟನೆ
ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಒನಕೆಯಲ್ಲಿ ಭತ್ತ ಕುಟ್ಟುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.