ಎಸ್‌ಐಒ, ವತಿಯಿಂದ ಶಿಕ್ಷಣದೆಡೆಗೆ ಚಿಣ್ಣರ ನಡಿಗೆ ಜನಜಾಗೃತಿ ಜಾಥಾ
ಉಪ್ಪಿನಂಗಡಿ, ಎ.28: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಸನ್ ಆಪ್ ಇಂಡಿಯಾ (ಎಸ್‌ಐಒ) ಉಪ್ಪಿನಂಗಡಿ ಶಾಖೆ ವತಿಯಿಂದ ಶಿಕ್ಷಣದೆಡೆಗೆ ಚಿಣ್ಣರ ನಡಿಗೆ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಣ ಹಕ್ಕು ಕಾಯ್ದೆ, ಫೇಲು ಇಲ್ಲ ಕಾಯ್ದೆ ಹಾಗೂ ಶಿಕ್ಷಣ ವ್ಯಾಪಾರೀಕರಣ ವಿಷಯಗಳನ್ನು ಮುಂದಿಟ್ಟುಕೊಂಡು ಜನ ಜಾಗೃತಿ ಕಾರ್ಯಕ್ರಮ ಉಪ್ಪಿನಂಗಡಿಯಲ್ಲಿ ಜರಗಿತು.
ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದಿಂದ ಹೊರಟ ಜಾಗೃತಿ ಜಾಥಾವನ್ನು (ಎಸ್‌ಐಒ)ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ತಲ್ಹಾ ಇಸ್ಮಾಯಿಲ್ ಉದ್ಘಾಟಿಸಿ ಮಾತನಾಡಿ, ಆರ್.ಟಿ.ಇ. ಜಾರಿಗೆ ಬಂದು 8 ವರ್ಷ ಕಳೆದರೂ ಸರ್ಕಾರದ ನಿರ್ಲಕ್ಷತನದಿಂದಾಗಿ ಅದು ಬಡವರ ಪಾಲಿಗೆ ದೊರಕುತ್ತಿಲ್ಲ. ದೊರಕಿದರೂ ಶಾಲೆಗಳಲ್ಲಿ ಈ ವಿದ್ಯಾರ್ಥಿಗಳೊಂದಿಗೆ ತಾರತಮ್ಯ ನೀತಿ ನಡೆಯುತ್ತಿದ್ದು, ಬ್ಯಾಗ್, ಶೂ, ಸಮವಸ್ತ್ರ ಎಂದು ಹೇಳಿಕೊಂಡು ಹಣ ವಸೂಲಿ ಮಾಡಲಾಗುತ್ತಿದ್ದು, ಇದು ಬದಲಾಗಬೇಕು ಎಂದರು.
ಎಸ್.ಐ.ಒ. ಉಪ್ಪಿನಂಗಡಿ ಘಟಕದ ಅಧ್ಯಕ್ಷ ಅಸ್ಲಾಂ ಪಂಜಾಳ ಮಾತನಾಡಿ, ಆರ್.ಟಿ.ಇ. ಬಳಕೆ ಸರಿಯಾಗಿ ಆಗದ ಕಾರಣ ಮತ್ತು ಅದನ್ನು ಕ್ರಮ ಪ್ರಕಾರ ಅನುಸರಿಸದ ಕಾರಣ ದೇಶದಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರ ವಿರುದ್ಧ ಎಸ್.ಐ.ಒ. ಉಪ್ಪಿನಂಗಡಿ ಘಟಕ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಎಸ್.ಐ.ಒ. ಉಪ್ಪಿನಂಗಡಿ ಘಟಕದ ಕಾರ್ಯದರ್ಶಿ ಅಬ್ದುಲ್ ರಜಾಕ್ ಸ್ವಾಗತಿಸಿ, ಮಾಧ್ಯಮ ಕಾರ್ಯದರ್ಶಿ ಬಾಸಿತ್ ಉಪ್ಪಿನಂಗಡಿ ವಂದಿಸಿದರು.