×
Ad

ಕಾಶ್ಮೀರದಲ್ಲಿ ಸಹಜ ಸ್ಥಿತಿಗೆ ಸುಪ್ರೀಂ ಯತ್ನ

Update: 2017-04-28 19:37 IST

ಹೊಸದಿಲ್ಲಿ,ಎ.28: ನಾಗರಿಕರು ಮತ್ತು ಭದ್ರತಾ ಪಡೆಗಳ ನಡುವೆ ಸರಣಿ ಹಿಂಸಾತ್ಮಕ ಘರ್ಷಣೆಗಳ ಬಳಿಕ ಉದ್ವಿಗ್ನತೆ ಹೆಚ್ಚುತ್ತಿರುವ ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಮರಳಿಸುವ ಯತ್ನಕ್ಕೆ ಮುಂದಾಗಿರುವ ಸರ್ವೋಚ್ಚ ನ್ಯಾಯಾಲಯವು ಅಲ್ಲಿಯ ಪ್ರತ್ಯೇಕತಾವಾದಿಗಳು ಮತ್ತು ವಕೀಲರ ನಡುವೆ ಮಾತುಕತೆ ಏರ್ಪಡಿಸುವಂತೆ ಶುಕ್ರವಾರ ಕೇಂದ್ರಕ್ಕೆ ಸೂಚಿಸಿದೆ.

 ಗೃಹಬಂಧನದಲ್ಲಿರುವ ಪ್ರತ್ಯೇಕತಾವಾದಿಗಳನ್ನು ಮಾತುಕತೆಯಲ್ಲಿ ತೊಡಗಿಸುವ ಮೂಲಕ ಸಹಜ ಸ್ಥಿತಿಯನ್ನು ಮರಳಿ ತರಲು ಮೊದಲ ಹೆಜ್ಜೆಯನ್ನಿರಿಸುವುದು ನ್ಯಾಯಾಲಯದ ಈ ಕ್ರಮದ ಉದ್ದೇಶವಾಗಿದೆ. ನಿಯಮಾವಳಿಗಳಲ್ಲಿ ಅವಕಾಶವಿದೆ ಎಂದರೆ ಮಾತ್ರ ಈ ಪ್ರಯತ್ನವನ್ನು ಮಾಡಬಹುದಾಗಿದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.

ಹೆಚ್ಚುತ್ತಿರುವ ಕಲ್ಲು ತೂರಾಟ ಮತ್ತು ನಾಗರಿಕರ ಸಾವುಗಳ ಘಟನೆಗಳ ನಡುವೆಯೇ ಯುವಕನೋರ್ವನನ್ನು ಸೇನಾ ಜೀಪಿಗೆ ಕಟ್ಟಿ ಪರೇಡ್ ಮಾಡಿಸಿದ್ದ ವೀಡಿಯೊ ಸೇರಿದಂತೆ ಮಾನವ ಹಕ್ಕು ಉಲ್ಲಂಘನೆ ಆರೋಪಗಳಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಸ್ಥಳೀಯರು ಮತ್ತು ಭದ್ರತಾ ಪಡೆಗಳ ನಡುವಿನ ಸಂಬಂಧ ಹದಗೆಟ್ಟಿದೆ.

ಕಳೆದ ವರ್ಷ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟ ಬಳಿಕ ಕಾಶ್ಮೀರ ಅಶಾಂತಿಯಲ್ಲಿ ಕುದಿಯುತ್ತಿದ್ದು, ಸುಮಾರು ನೂರು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಮಾತುಕತೆಯನ್ನು ಪುನರಾರಂಭಿಸಲು ಕರೆಗಳ ಬಳಿಕವೂ ಪ್ರತ್ಯೇಕತಾವಾದಿಗಳೊಂದಿಗೆ ಯಾವುದೇ ಮಾತುಕತೆ ನಡೆಸುವುದನ್ನು ಸರಕಾರವು ತಳ್ಳಿಹಾಕಿದೆ.

ಈ ತಿಂಗಳು ಶ್ರೀನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭ ಎಂಟು ಜನರು ಭದ್ರತಾ ಪಡೆಗಳ ಗುಂಡುಗಳಿಗೆ ಬಲಿಯಾದ ಬಳಿಕ ಹಿಂಸಾಚಾರ ಮತ್ತೊಮ್ಮೆ ತಾಂಡವವಾಡುತ್ತಿದೆ.

ಯಾವುದೇ ಹಿಂಸಾಚಾರ, ಕಲ್ಲುತೂರಾಟ ನಡೆಯದಿದ್ದರೆ ಮತ್ತು ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ಮರಳಿದರೆ ಪೆಲೆಟ್ ಗನ್‌ಗಳನ್ನು ಬಳಸದಂತೆ ತಾನು ಸರಕಾರಕ್ಕೆ ಸೂಚಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.

ಪೆಲೆಟ್ ಗನ್‌ಗಳ ಬಳಕೆಯನ್ನು ನಿಲ್ಲಿಸಿದರೆ ಹಿಂಸಾಚಾರವನ್ನು ನಿಯಂತ್ರಿಸಲು ಕೈಗೊಳ್ಳಬಹುದಾದ ಕ್ರಮಗಳ ಪ್ರಸ್ತಾವದೊಂದಿಗೆ ಮೇ 9ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಪೀಠವು ಜಮ್ಮು-ಕಾಶ್ಮೀರ ವಕೀಲರ ಸಂಘಕ್ಕೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News