ಗೋಮಾಂಸದ ಹೆಸರಲ್ಲಿ ಕೊರಗರಿಗೆ ಹಲ್ಲೆ: ಆರೋಪಿಗಳ ಗಡಿಪಾರಿಗೆ ಆಗ್ರಹ
ಉಡುಪಿ, ಎ.28: ದನದ ಮಾಂಸ ಸೇವಿಸುತ್ತಿರುವುದಾಗಿ ಆರೋಪಿಸಿ ಬಜರಂಗದಳ ಕಾರ್ಯಕರ್ತರು ಹೊಸಾಡು ಗ್ರಾಮದ ಗಾಣದಮಕ್ಕಿಯ ಕೊರಗ ಸಮುದಾಯದವರ ಮೇಲೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾ ಒಕ್ಕೂಟ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಶುಕ್ರವಾರ ಉಡುಪಿ ಎಸ್ಪಿ ಕಚೇರಿ ಮುಂಭಾಗ ಧರಣಿ ನಡೆಯಿತು.
ಕೃತ್ಯ ಎಸಗಿದ ಬಜರಂಗದಳದ ಕಾರ್ಯಕರ್ತರನ್ನು ತಕ್ಷಣವೇ ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಈ ಸಂದರ್ಭ ಧರಣಿನಿರತರು ಒತ್ತಾಯಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೆ.ಪ್ರೊ.ಕೃಷ್ಣಪ್ಪ ಬಣ) ಜಿಲ್ಲಾ ಸಂಚಾಲಕ ನಾರಾಯಣ ಮಣೂರು, ಶೂದ್ರ ಯುವಕರ ತಲೆಗೆ ಧರ್ಮದ ವಿಷ ಬೀಜವನ್ನು ಬಿತ್ತಿ ಮನೆಯಲ್ಲಿರುವ ತಂದೆ ತಾಯಂದಿರನ್ನು ಬಿಟ್ಟು ಪ್ರಾಣಿಯನ್ನು ವೈಭವೀಕರಿಸಲಾಗುತ್ತಿದೆ. ಅದನ್ನು ಸಮಾಜದ ಮೇಲೆ ಹೇರುವ ಕೃತ್ಯವನ್ನು ಮನುವಾದಿ ಮನಸ್ಸುಗಳು ಮಾಡುತ್ತಿವೆ. ಇಂದು ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲವಾಗಿದೆ. ಇದರಿಂದಾಗಿಯೇ ಸಮಾಜದಲ್ಲಿ ಶಾಂತಿ ಕದಡುತ್ತಿದೆ ಎಂದರು.
ದಸಂಸ(ಅಂಬೇಡ್ಕರ್‌ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಮಾತನಾಡಿ, ಆಹಾರ ಪದ್ಧತಿಯನ್ನು ದಲಿತರ ಮೇಲೆ ಹೇರುವ ಕೆಲಸ ನಡೆಯುತ್ತಿದೆ. ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಿದ್ದ ಇಂತಹ ಕೃತ್ಯ ಈಗ ಉಡುಪಿಗೂ ಬಂದಿದೆ. ಆಹಾರದ ಆಯ್ಕೆ ನಮ್ಮದು. ಇದು ಹಿಂದೆಯೂ ಇತ್ತು. ಇನ್ನು ಕೂಡ ಇದನ್ನು ಮುಂದುವರಿಸುತ್ತೇವೆ. ಅದನ್ನು ಕೇಳುವ ಹಕ್ಕು ಯಾರಿಗೂ ಇಲ್ಲ ಎಂದರು.
ಕೊರಗರ ಮೇಲೆ ದಾಳಿ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಪೊಲೀಸರು, ಅಮಾಯಕ ಕೊರಗ ಯುವಕರನ್ನೇ ಬಂಧಿಸಿ ಠಾಣೆಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ. ಇಂದು ಗಾಣದಮಕ್ಕಿಯ ಕೊರಗ ಕುಟುಂಬಗಳು ಭಯದ ವಾತಾವರಣದಲ್ಲಿ ಬದುಕುತ್ತಿವೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡುವ ಬದಲು ಅವರ ಆಹಾರಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಅವರು ದೂರಿದರು.
ದಸಂಸ(ಭೀಮಘರ್ಜನೆ) ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು ಮಾತನಾಡಿ, ಈ ಪ್ರಕರಣದಲ್ಲಿ ಸ್ಥಳೀಯ ದಲಿತ ಮುಖಂಡ, ಮಾಜಿ ಜಿಪಂ ಸದಸ್ಯ ಅನಂತ ಮೊವಾಡಿ ಬಿಜೆಪಿಯವರೊಂದಿಗೆ ಸೇರಿ ಒಳಸಂಚು ಮಾಡುತ್ತಿದ್ದಾರೆ. ಸ್ಥಳೀಯ ಶಾಸಕ ಗೋಪಾಲ ಪೂಜಾರಿ ಈ ಬಗ್ಗೆ ವೌನ ವಹಿಸಿದ್ದಾರೆ. ಯಾವುದೇ ಪ್ರಭಾವಕ್ಕೆ ಒಳಗಾಗದೆ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು. ಅಲ್ಲದೆ ಪೊಲೀಸರ ವಿರುದ್ಧ ಗೃಹ ಸಚಿವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಚಿಂತಕ ಜಿ.ರಾಜಶೇಖರ್ ಮಾತನಾಡಿ, ಮೊವಾಡಿ ಪ್ರಕರಣ ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದಾಳಿಯ ಮುಂದುವರಿದ ಭಾಗವಾಗಿದೆ. ರಾಜಕಾರಣಿಗಳು ಇದರ ಬಗ್ಗೆ ನಿಷ್ಕ್ರಿಯರಾಗಿದ್ದಾರೆ. ಹಿಂಸೆ ಮಾತ್ರವಲ್ಲ ಅದರ ಬಗ್ಗೆ ತೋರಿಸುವ ಉದಾಸೀನತೆ ಕೂಡ ಖಂಡನೀಯ ಎಂದು ಹೇಳಿದರು.
ಬಳಿಕ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿ, ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು. ಅಮಾಯಕ ಕೊರಗ ಯುವಕರ ಮೇಲೆ ಹಾಕಲಾದ ಮೊಕದ್ದಮೆಯನ್ನು ವಾಪಸ್ ಪಡೆಯಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಂಬೇಡ್ಕರ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಕಾರ್ಕಳದ ಶ್ರೀಕಾಂತ್‌ನನ್ನು ಬಂಧಿಸಬೇಕು ಎಂದು ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಕೆ.ಟಿ.ಬಾಲಕೃಷ್ಣ, ಈಗಾಗಲೇ ಗಾಣದಮಕ್ಕಿ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಅಂಬೇಡ್ಕರ್ ರನ್ನು ನಿಂದಿಸಿರುವ ಪ್ರಕರಣದ ತನಿಖೆ ಕೂಡ ನಡೆಯುತ್ತಿದೆ. ಶೀಘ್ರವೇ ಕ್ರಮ ಜರಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ದಮನಿತರ ಸ್ವಾಭಿಮಾನ ಹೋರಾಟ ಸಮಿತಿಯ ಶ್ಯಾಮ್‌ರಾಜ್ ಬಿರ್ತಿ, ದಸಂಸ ಮುಖಂಡರಾದ ಎಸ್.ಎಸ್.ಪ್ರಸಾದ್, ಶೇಖರ್ ಹೆಜ್ಮಾಡಿ, ವಿಶ್ವನಾಥ್ ಪೇತ್ರಿ, ರೆ.ಫಾ.ವಿಲಿಯಂ ಮಾರ್ಟಿಸ್, ಹೊಸಾಡು ಗ್ರಾಪಂ ಸದಸ್ಯೆ ಶಕುಂತಲಾ ಮಾತನಾಡಿದರು. ಪ್ರೊ.ಫಣಿರಾಜ್, ಪ್ರೊ.ಸಿರಿಲ್ ಮಥಾಯಸ್, ಎಸ್. ನಾರಾಯಣ, ಅಝೀಝ್ ಉದ್ಯಾವರ, ಯಾಸೀನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.
‘ನಮ್ಮ ಇಷ್ಟದ ಆಹಾರ ತಿನ್ನಲು ಬಿಡಿ’
ದುಷ್ಕರ್ಮಿಗಳು ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ನಾವು ತಯಾರಿಸಿದ ಮಾಂಸದ ಊಟವನ್ನು ಕಿತ್ತು ಬಿಸಾಡಿ, ಯುವಕರಿಗೆ ತುಳಿದು, ದೊಣ್ಣೆಯಿಂದ ಹೊಡೆದಿದ್ದಾರೆ. ತಡೆಯಲು ಹೋದ ನನಗೆ ಜಾತಿ ನಿಂದನೆ ಮಾಡಿ ‘ನೀನು ಎಂತ ಪಂಚಾಯತ್ ಸದಸ್ಯೆ, ನಿನ್ನನ್ನು ಇಲ್ಲೇ ರೇಪ್ ಮಾಡಿದರೆ ಯಾರು ಕೇಳುತ್ತಾರೆ’ ಎಂದು ಬೆದರಿಕೆ ಹಾಕಿದರು. ಕೈಕಾಲು ಹಿಡಿದು ಬೇಡಿಕೊಂಡರು ಸಹ ಬಿಡದೆ ‘ನಿಮ್ಮನ್ನು ಬಡಿದುಕೊಂದರೆ ಯಾರು ಕೇಳುತ್ತಾರೆ. ಪೊಲೀಸರಿಗೆ ದೂರು ನೀಡಿದರೆ ಎಂಟು ಕುಟುಂಬಗಳ ಮನೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಲಾಗುವುದು’ ಎಂಬುದಾಗಿ ಬೆದರಿಸಿದ್ದರು ಎಂದು ಹೊಸಾಡು ಗ್ರಾಪಂ ಸದಸ್ಯೆ ಶಕುಂತಲಾ ನೋವು ತೋಡಿಕೊಂಡರು.
ನಮಗೆ ರಕ್ಷಣೆ ನೀಡಬೇಕು. ನಮ್ಮ ಯುವಕರ ಮೇಲೆ ಹಾಕಲಾದ ಮೊಕದ್ದಮೆಯನ್ನು ಕೈಬಿಡಬೇಕು. ನಾವು ತಿನ್ನುವ ಆಹಾರದ ಬಗ್ಗೆ ಯಾವುದೇ ತೊಂದರೆ ಮಾಡಬಾರದು ಎಂದು ಶಕುಂತಲಾ ಹೇಳಿದರು.
ಆರೋಪಿಗಳ ವಿರುದ್ಧ ಕಾನೂನು ಕ್ರಮ: ಪ್ರಮೋದ್
ಕೊರಗರ ಮೇಲಿನ ಹಲ್ಲೆ ಹಾಗೂ ಜಾತಿನಿಂದನೆ ಪ್ರಕರಣದ ಬಗ್ಗೆ ನನಗೆ ಇಂದು ಮಾಹಿತಿ ಸಿಕ್ಕಿತು. ಕೂಡಲೇ ಎಸ್ಪಿಯವರಿಗೆ ದೂರವಾಣಿ ಕರೆ ಮಾಡಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಸೂಚನೆ ನೀಡಿದ್ದೇನೆ. ಅದರಂತೆ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಇದ್ದರೂ, ಕಾನೂನು ಅದರದ್ದೇ ಆದ ಕ್ರಮ ತೆಗೆದುಕೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವ ರಾಜ್ ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.