ಜರ್ಮನಿ : ಸರಕಾರಿ ನೌಕರರು ಮುಖ ಮುಚ್ಚುವ ಬಟ್ಟೆ ಧರಿಸಲು ನಿಷೇಧ

Update: 2017-04-28 15:03 GMT

ಬರ್ಲಿನ್, ಎ. 28: ಕೆಲಸದ ಸ್ಥಳಗಳಲ್ಲಿ ಸರಕಾರಿ ನೌಕರರು, ನ್ಯಾಯಾಧೀಶರು ಮತ್ತು ಸೈನಿಕರು ಸಂಪೂರ್ಣವಾಗಿ ಮುಖ ಮುಚ್ಚುವ ಬಟ್ಟೆಗಳನ್ನು ತೊಡುವುದನ್ನು ನಿಷೇಧಿಸುವ ಮಸೂದೆಯನ್ನು ಜರ್ಮನಿ ಸಂಸತ್ತಿನ ಕೆಳಮನೆ ‘ಬುಂಡೆಸ್ಟಾಗ್’ ಗುರುವಾರ ಅಂಗೀಕರಿಸಿದೆ.

‘ಕಾನೂನಾತ್ಮಕವಾಗಿ ಎಲ್ಲೆಲ್ಲ ಸಾಧ್ಯವೋ ಅಲ್ಲಿ ಸಂಪೂರ್ಣ ಮುಖ ಮುಚ್ಚುವ ಮುಸ್ಲಿಮ್ ಬಟ್ಟೆಗಳನ್ನು ನಿಷೇಧಿಸುವಂತೆ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಡಿಸೆಂಬರ್‌ನಲ್ಲಿ ಕರೆ ನೀಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ 10 ಲಕ್ಷಕ್ಕೂ ಅಧಿಕ ವಲಸಿಗರು ಜರ್ಮನಿಗೆ ಆಗಮಿಸಿದ್ದಾರೆ. ಅವರ ಪೈಕಿ ಹೆಚ್ಚಿನವರು ಮಧ್ಯ ಪ್ರಾಚ್ಯದ ಮುಸ್ಲಿಮರು.
‘‘ನಮ್ಮ ವೌಲ್ಯಗಳ ಬಗ್ಗೆ ವಲಸಿಗರಿಗೆ ತಿಳಿಸಿಕೊಡಬೇಕು ಹಾಗೂ ಇತರ ಸಂಸ್ಕೃತಿಗಳಿಗೆ ನಾವು ಹೊಂದಿರುವ ಸಹಿಷ್ಣುತೆಯ ಎಲ್ಲೆಗಳ ಬಗ್ಗೆ ನಾವು ಸ್ಪಷ್ಟಪಡಿಸಬೇಕಾಗಿದೆ’’ ಎಂದು ಜರ್ಮನಿಯ ಆಂತರಿಕ ಸಚಿವ ಥಾಮಸ್ ಡಿ ಮೇಷಿಯರ್ ಹೇಳಿದರು.

‘‘ನಾವು ಅಂಗೀಕರಿಸಿರುವ ಮಸೂದೆಯು ಈ ನಿಟ್ಟಿನಲ್ಲಿ ಮಹತ್ವದ ದೇಣಿಗೆ ನೀಡುತ್ತದೆ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News