ಹೊರದಬ್ಬಿದ ಪ್ರಯಾಣಿಕನೊಂದಿಗೆ ಯುನೈಟೆಡ್ ಏರ್‌ಲೈನ್ಸ್ ಒಪ್ಪಂದ

Update: 2017-04-28 15:23 GMT

ಶಿಕಾಗೊ, ಎ. 28: ಈ ತಿಂಗಳ ಆರಂಭದಲ್ಲಿ ತನ್ನ ವಿಮಾನದಿಂದ ದರ ದರನೆ ಎಳೆದು ಹೊರದಬ್ಬಿದ್ದ ಪ್ರಯಾಣಿಕ ಡೇವಿಡ್ ಡಾವೊ ಜೊತೆ ಅಮೆರಿಕದ ವಾಯುಯಾನ ಸಂಸ್ಥೆ ಯುನೈಟೆಡ್ ಏರ್‌ಲೈನ್ಸ್ ಗುರುವಾರ ‘ಪರಸ್ಪರ ಸಮ್ಮತಾರ್ಹ’ ಒಪ್ಪಂದವೊಂದಕ್ಕೆ ಬಂದಿದೆ ಎಂದು ಪ್ರಯಾಣಿಕನ ವಕೀಲರು ಹೇಳಿದ್ದಾರೆ.

ಆದಾಗ್ಯೂ, ಒಪ್ಪಂದದ ಶರತ್ತುಗಳ ಪ್ರಕಾರ, ಡಾವೊ ಅವರ ವಕೀಲರಾದ ಥಾಮಸ್ ಡೆಮೆಟ್ರಿಯೊ ಮತ್ತು ಸ್ಟೀಫನ್ ಗೋಲನ್ ಪರಿಹಾರ ಮೊತ್ತದ ಬಗ್ಗೆ ಮಾಹಿತಿ ನೀಡಲಿಲ್ಲ.

ಎಪ್ರಿಲ್ 9ರಂದು ನಡೆದ ಘಟನೆಯಲ್ಲಿ, 69 ವರ್ಷದ ಡಾವೊ ಅವರನ್ನು ವಿಮಾನದ ಭದ್ರತಾ ಸಿಬ್ಬಂದಿ ವಿಮಾನದಿಂದ ಎಳೆದುಕೊಂಡು ಹೋಗಿ ಹೊರಹಾಕಿದ್ದರು. ಕೂಗುತ್ತಿರುವ ಪ್ರಯಾಣಿಕನನ್ನು ನೆಲದಲ್ಲೇ ಭದ್ರತಾ ಸಿಬ್ಬಂದಿಯೋರ್ವ ಎಳೆದುಕೊಂಡು ಹೋಗುತ್ತಿರುವ ದೃಶ್ಯಕ್ಕೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ವಿಮಾನದ ಟಿಕೆಟ್‌ಗಳು ನಿಗದಿಗಿಂತ ಹೆಚ್ಚು ಮಾರಾಟವಾಗಿದ್ದು ವಿಮಾನ ಸಂಪೂರ್ಣವಾಗಿ ತುಂಬಿತ್ತು. ತನ್ನ ಸಿಬ್ಬಂದಿಗೆ ಜಾಗ ಮಾಡಿಕೊಡುವುದಕ್ಕಾಗಿ ಪ್ರಯಾಣಿಕನನ್ನು ಹೊರಹಾಕಬೇಕಾಯಿತು ಎಂದು ಯುನೈಟೆಡ್ ಏರ್‌ಲೈನ್ಸ್ ಬಳಿಕ ಹೇಳಿಕೆ ನೀಡಿತ್ತು.

ಈ ಘಟನೆಯಲ್ಲಿ ಡಾವೊ ಆಘಾತಕ್ಕೊಳಗಾಗಿದ್ದರು, ಅವರ ಹಲ್ಲುಗಳು ಮತ್ತು ಮೂಗು ಮುರಿದಿದ್ದವು ಎಂದು ವಕೀಲರು ಹೇಳಿದ್ದರೆ.‘‘ಶಿಕಾಗೊ ನಗರ ಸೇರಿದಂತೆ ಇತರ ಯಾರ ಮೇಲೂ ಆರೋಪ ಹೊರಿಸದೆ, 3411 ವಿಮಾನದಲ್ಲಿ ನಡೆದ ಘಟನೆಗೆ ವಿಮಾನಯಾನ ಸಂಸ್ಥೆ ಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದೆ’’ ಎಂದು ವಕೀಲ ಡೆಮೆಟ್ರಿಯೊ ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News