ಸಿರಿಯ: ಆಸ್ಪತ್ರೆಗಳ ಮೇಲೆ ವಾಯು ದಾಳಿ; 10 ಸಾವು

Update: 2017-04-28 15:26 GMT

ಡೇರ್ ಶಾರ್ಕಿ (ಸಿರಿಯ), ಎ. 28: ವಾಯುವ್ಯ ಸಿರಿಯದಲ್ಲಿ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿರುವ ಎರಡು ಆಸ್ಪತ್ರೆಗಳ ಮೇಲೆ ಗುರುವಾರ ನಡೆದ ವಾಯುದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಮೃತಪಟ್ಟವರ ಪೈಕಿ ಇನ್‌ಕ್ಯುಬೇಟರ್‌ನಲ್ಲಿದ್ದ ಎರಡು ಹಸುಳೆಗಳೂ ಸೇರಿವೆ.ಬಂಡುಕೋರರ ನಿಯಂತ್ರಣದ ಇದ್ಲಿಬ್ ನಗರದ ಮೇಲೆ ನಡೆದ ವಾಯು ದಾಳಿಗಳಲ್ಲಿ ಸಂಭವಿಸಿದ 19 ಸಾವುಗಳ ಪೈಕಿ ಈ ಸಾವುಗಳೂ ಸೇರಿವೆ.

ಈ ಪ್ರಾಂತದ ಆಸ್ಪತ್ರೆಗಳ ಮೇಲೆ ವಾಯು ದಾಳಿಗಳು ನಡೆಯುತ್ತಿರುವುದು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಇದು ಮೂರನೆ ಬಾರಿಯಾಗಿದೆ.‘‘ರಶ್ಯದ ವಿಮಾನದಂತೆ ಕಂಡುಬಂದ ವಿಮಾನವೊಂದು ಹೊರವಲಯದ ಆಸ್ಪತ್ರೆಯೊಂದರ ಮೇಲೆ ಮುಂಜಾನೆ ಸತತ ನಾಲ್ಕು ಬಾರಿ ದಾಳಿಗಳನ್ನು ನಡೆಸಿತು’’ ಎಂದು ಸ್ಥಳದಲ್ಲಿದ್ದ ಎಎಫ್‌ಪಿ ವರದಿಗಾರ ಡೇರ್ ಶರ್ಕಿ ಹೇಳಿದರು.

‘‘ತುರ್ತು ಚಿಕಿತ್ಸಾ ಘಟಕದಲ್ಲಿದ್ದ ಆರು ನಾಗರಿಕರು ಮೃತಪಟ್ಟಿದ್ದಾರೆ. ಈ ಪೈಕಿ ಇನ್‌ಕ್ಯುಬೇಟರ್‌ನಲ್ಲಿದ್ದ ಎರಡು ಹಸುಳೆಗಳೂ ಸೇರಿವೆ. ಇನ್‌ಕ್ಯುಬೇಟರ್‌ಗೆ ಆಮ್ಲಜನಕ ಪೂರೈಸುತ್ತಿದ್ದ ಯಂತ್ರ ದಾಳಿಯಲ್ಲಿ ನಾಶಗೊಂಡ ಬಳಿಕ ಈ ಹಸುಳೆಗಳು ಸಾವಿಗೀಡಾಗಿವೆ’’ ಎಂದು ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರಹ್ಮಾನ್ ಎಎಫ್‌ಪಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News