ಬಾವಿಗಿಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು
ಉಡುಪಿ, ಎ.28: ಶುಚಿಗೊಳಿಸಲು ಬಾವಿಗಿಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರ ಎಂಬಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಮೂಲತಃ ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ನಿವಾಸಿ ಹೊನ್ನಪ್ಪ ಗೌಡ(45) ಹಾಗೂ ಇವರ ಪತ್ನಿಯ ಅಕ್ಕನ ಮಗ ಲೋಕೇಶ್ (24) ಎಂದು ಗುರುತಿಸಲಾಗಿದೆ. ಇವರುನಾಲ್ಕು ವರ್ಷಗಳಿಂದ ಕುಟುಂಬ ಸಮೇತರಾಗಿ ಉಡುಪಿ ಸುಬ್ರಹ್ಮಣ್ಯ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಬಾಡಿಗೆ ಮನೆಯ ಮುಂದೆ ಇರುವ ಸುಮಾರು 65-70 ಅಡಿ ಆಳದ ಬಾವಿಯನ್ನು ಶುಚಿಗೊಳಿಸಲು ಹೊನ್ನಪ್ಪ ಗೌಡ ಹಾಗೂ ಲೋಕೇಶ್ ಇಳಿದಿ ದ್ದರು. ಇವರಲ್ಲಿ ಲೋಕೇಶ್ ಬಾವಿಯೊಳಗೆ ನೀರಿಗೆ ಇಳಿದು ಶುಚಿಗೊಳಿಸುವ ಕೆಲಸ ಮಾಡುತ್ತಿದ್ದರೆ ಹೊನ್ನಪ್ಪ ಗೌಡ ಬಾವಿಯೊಳಗಿನ ಸ್ವಲ್ಪ ಮೇಲ್ಭಾಗದಲ್ಲಿದ್ದ ಕಟ್ಟೆಯ ಮೇಲೆ ನಿಂತಿದ್ದರು. ಈ ವೇಳೆ ಲೋಕೇಶ್ ಆಕಸ್ಮಿಕವಾಗಿ ಆರು ಅಡಿಯಷ್ಟು ಇದ್ದ ನೀರಿನಲ್ಲಿ ಮುಳುಗಿದರು.
ಇದನ್ನು ಕಂಡ ಹೊನ್ನಪ್ಪ ಗೌಡ ಕೂಡಲೇ ನೀರಿಗೆ ಹಾರಿ ಲೋಕೇಶ್‌ನನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಅವರಿಬ್ಬರೂ ನೀರಿನಲ್ಲಿ ಮುಳುಗಿ ಉಸಿರು ಗಟ್ಟಿ ಮೃತಪಟ್ಟರು. ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳೀಯರೊಂದಿಗೆ ಸೇರಿ 3:15ರ ಸುಮಾರಿಗೆ ಎರಡು ಮೃತ ದೇಹಗಳನ್ನು ಮೇಲಕ್ಕೆತ್ತಿದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.