×
Ad

ಮದ್ಯಪಾನ ಮಾಡಿ ವಾಹನ ಚಲಾಯಿಸಿ ಮಹಿಳೆಯ ಸಾವಿಗೆ ಕಾರಣನಾದವನಿಗೆ ಶಿಕ್ಷೆ

Update: 2017-04-28 22:15 IST

ಮಂಗಳೂರು, ಎ.28: ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿ ಮಹಿಳೆಯೋರ್ವರ ಸಾವಿಗೆ ಕಾರಣನಾಗಿದ್ದ ಅಪರಾಧಿಯೋರ್ವನಿಗೆ ಮಂಗಳೂರಿನ ಜೆಎಂಎಫ್‌ಸಿ 3ನೆ ನ್ಯಾಯಾಲಯವು 6 ತಿಂಗಳ ಸಂಜೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಪಂಜಿಮೊಗರು ಶಾಂತಿನಗರ ನಿವಾಸಿ ದೇವದಾಸ ಸುವರ್ಣ (55) ಶಿಕ್ಷೆಗೊಳಗಾದ ಅಪರಾಧಿ. ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮಂಜುನಾಥ್ ಆರ್. ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: 2014 ಸೆಪ್ಟೆಂಬರ್ 14 ರಂದು ಸಂಜೆ ಆರೋಪಿ ದೇವದಾಸ ಸುವರ್ಣ ಅಮಲು ಪದಾರ್ಥ ಸೇವಿಸಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕೋಡಿಕಲ್‌ ಕ್ರಾಸ್ ಬಳಿ ಎದುರಿನಿಂದ ಹೋಗುತ್ತಿದ್ದ ಕಾರೊಂದಕ್ಕೆ ಢಿಕ್ಕಿ ಹೊಡೆದಿತ್ತು. ಕಾರು ಎದುರಿನಿಂದ ಹೋಗುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದಿತ್ತು. ಈ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ಕುಂದಾಪುರದ ಸುಮಿತ್ರಾ ಪ್ರಭು (73) ಎಂಬವರು ಗಂಭೀರ ಗಾಯಗೊಂಡು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಸಹಪ್ರಯಾಣಿಕರಾದ ರೂಪಾ ರಾವ್ ಶ್ಯಾನುಭೋಗ್ ಹಾಗೂ ಗೋವಿಂದ ರಾವ್ ಶ್ಯಾನುಭೋಗ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಈ ಬಗ್ಗೆ ಸಂಚಾರಿ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಂಚಾರ ಪಿಎಸ್‌ಐ ಗೋಪಾಲಕೃಷ್ಣ ಭಟ್ ತನಿಖೆ ನಡೆಸಿದ್ದರು. ಪ್ರಭಾರ ಇನ್ಸ್‌ಪೆಕ್ಟರ್ ಆಗಿದ್ದ ಲೋಕೇಶ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕಮಾರ್ ಬಿ. ಸರಕಾರದ ಪರವಾಗಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News