ಮುಲ್ಕಿ ಸರಕಾರಿ ಆಸ್ಪತ್ರೆಯ ನೀರಿನ ಸಮಸ್ಯೆ ಬಗೆಹರಿಸಲು ವೈದ್ಯರ ಆಗ್ರಹ
ಮುಲ್ಕಿ, ಎ.28: ಇಲ್ಲಿನ ನಗರ ಪಂಚಾಯತ್ ಮಾಸಿಕ ಸಭೆಯಲ್ಲಿ ನೀರಿನ ಸಮಸ್ಯೆ, ನೂತನ ಬಸ್ಸು ನಿಲ್ದಾಣಕ್ಕೆ ಅನುದಾನ ಮೊದಲಾದ ಬಗ್ಗೆ ಚರ್ಚೆ ನಡೆಯಿತು.
ನಗರ ಪಂಚಾಯತ್ ಸಭೆಯಲ್ಲಿ ಮುಲ್ಕಿ ಸರಕಾರಿ ಆಸ್ಪತ್ರೆ ವೈದ್ಯರಾದ ಡಾ.ಕೃಷ್ಣ ಮಾತನಾಡಿ, ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದೆ. ನ.ಪಂ. ಆಸ್ಪತ್ರೆಯ ವಸತಿಗೃಹಗಳಲ್ಲಿಯೂ ನೀರಿನ ಸಮಸ್ಯೆ ಇದ್ದು ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಮುಲ್ಕಿಗೆ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಾಸಕ ಅಭಯಚಂದ್ರ ಅವರ ನೇತೃತ್ವದಲ್ಲಿ 3 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿ ಮಂಜೂರಾಗಿದೆ ಎಂದು ಸಭೆಗೆ ಮಾಹಿತಿ ನೀಡಿದ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ, ಕೂಡಲೇ ನಿಲ್ದಾಣಕ್ಕೆ ಜಾಗ ಗುರುತಿಸಿ ಕಾಮಗಾರಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ನ.ಪಂ. ವ್ಯಾಪ್ತಿಯ ಕೆ.ಎಸ್. ರಾವ್ ನಗರದಲ್ಲಿ ಮೊಬೈಲ್ ಟವರಿನ ಬದಿಯಲ್ಲಿರುವ ನೀರು ಹೋಗುವ ಚರಂಡಿ ನಗರ ಪಂಚಾಯತ್‌ಗೆ ಸೇರಿದ್ದು. ಈ ಬಗ್ಗೆ ನಕ್ಷೆ ಪರಿಶೀಲಿಸಿ ಚರಂಡಿ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸುನಿಲ್ ಆಳ್ವ ಹೇಳಿದರು