ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿಐಟಿಯು ಒತ್ತಾಯ
ಮಂಗಳೂರು, ಎ.28: ಬೀದಿಬದಿ ವ್ಯಾಪಾರಸ್ಥರ ಮೇಲಿನ ದಾಳಿಯನ್ನು ನಿಲ್ಲಿಸಿ ಅವರಿಗೆ ಪರ್ಯಾಯ ವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಸಿಐಟಿಯುಗೆ ಸಂಯೋಜಿತಗೊಂಡಿರುವ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನಿಯೋಗವೊಂದು ಮೇಯರ್ ಹಾಗೂ ಅಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಮನಪಾ ವ್ಯಾಪ್ತಿಯಲ್ಲಿ 6 ವರ್ಷಗಳಿಂದ ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆಯುತ್ತಿದ್ದರೂ, ದೇಶದ ಪಾರ್ಲಿಮೆಂಟಲ್ಲಿ ಮಸೂದೆಯೊಂದು ಜಾರಿಗೊಂಡಿದ್ದರೂ, ಇನ್ನೂ ಕೂಡ ಈ ಬಗ್ಗೆ ಸ್ಪಷ್ಟತೆಯಾಗಿಲ್ಲ. ಕಾಲಕಾಲಕ್ಕೆ ಟಿವಿಸಿ ಸಭೆ ಕರೆಯುತ್ತಿಲ್ಲ. 2017ರ ಜನವರಿ 16ರಂದು ಟಿವಿಸಿ ಸಭೆ ನಡೆದು 2ನೆ ಹಂತದ ಗುರುತು ಚೀಟಿ ನೀಡಲು ತೀರ್ಮಾನಿಸಲಾಗಿದೆ. ಜನವರಿ 31ರೊಳಗೆ ಅದರ ಪ್ರಕ್ರಿಯೆ ನಡೆಸಬೇಕೆಂದು, ಅದಕ್ಕಾಗಿ ಕೋರ್ ಕಮಿಟಿಯನ್ನು ಕೂಡ ರಚಿಸಲಾಗಿತ್ತು. ಆದರೆ ಈ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸದ ಮನಪಾ, ಈಗ ಏಕಾಏಕಿ ದಾಳಿ ನಡೆಸಿರುವುದು ಸರಿಯಲ್ಲ. ವೆಂಡಿಂಗ್ ಝೋನ್ ರಚಿಸಿ, ಅದರ ಉದ್ಘಾಟನೆ ನಡೆದಿದ್ದರೂ, ಅದಕ್ಕೆ ತಕ್ಕ ವ್ಯವಸ್ಥೆಯಾಗಿಲ್ಲ.
ಒಟ್ಟಿನಲ್ಲಿ ಪ್ರತಿಯೊಂದು ಹಂತದಲ್ಲಿ ವೈಫಲ್ಯ ಕಂಡ ಮನಪಾ, ಈಗ ಬೀದಿಬದಿ ವ್ಯಾಪಾರಸ್ಥರ ಮೇಲೆ ಗೂಬೆ ಕೂರಿಸಿ, ಅವರನ್ನು ಎತ್ತಂಗಡಿ ನಡೆಸುತ್ತಿರುವುದು ಸರಿಯಲ್ಲ. ದಾಳಿಯನ್ನು ತಕ್ಷಣ ನಿಲ್ಲಿಸಬೇಕು, 2ನೆ ಹಂತದ ಗುರುತು ಚೀಟಿಯನ್ನು ನೀಡಬೇಕು, ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಸಿರುವ ಸಂಘವು, ಇಲ್ಲದಿದ್ದಲ್ಲಿ ತೀವ್ರ ಹೋರಾಟವನ್ನು ನಡೆಸಬೇಕಾದೀತು ಎಂದು ಎಚ್ಚರಿಕೆಯನ್ನು ನೀಡಿದೆ.
ನಿಯೋಗದಲ್ಲಿ ಸಂಘದ ಗೌರವಾಧ್ಯಕ್ಷರಾದ ಸುನೀಲ್‌ಕುಮಾರ್ ಬಜಾಲ್, ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಪದಾಧಿಕಾರಿಗಳಾದ ಆಸಿಫ್, ಅಣ್ಣಯ್ಯ, ಆದಂ ಬಜಾಲ್, ಝಾಕಿರ್ ಹುಸೇನ್, ನೌಷಾದ್, ಅತಾವುಲ್ಲಾ, ಮೇಬಲ್ ಡಿಸೋಜ, ಮೇರಿ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.