ಅಮೆರಿಕದ ಮೊಟೆಲ್‌ನೆದುರು ಗುಂಡಿನ ಕಾಳಗಕ್ಕೆ ಭಾರತೀಯ ಬಲಿ
ನ್ಯೂಯಾರ್ಕ್,ಎ.28: ಅಮೆರಿಕದ ಟೆನ್ನೆಸ್ಸಿಯ ವೈಟ್‌ಹೆವೆನ್‌ನಲ್ಲಿಯ ಮೊಟೆಲೊಂದರ ಹೊರಗೆ ನಡೆದ ಗುಂಡಿನ ಕಾಳಗದಲ್ಲಿ ಅಮಾಯಕ ಭಾರತೀಯ ವ್ಯಕ್ತಿಯೋರ್ವರು ಕೊಲ್ಲಲ್ಪಟ್ಟಿದ್ದಾರೆ. ಇದರೊಂದಿಗೆ ಫೆಬ್ರವರಿಯಿಂದೀಚಿಗೆ ಈ ದೇಶದಲ್ಲಿ ಕೊಲ್ಲಲ್ಪಟ್ಟ ಭಾರತೀಯ ಸಮುದಾಯದವರ ಸಂಖ್ಯೆ ಐದಕ್ಕೇರಿದೆ.
ಮೃತ ಖಂಡು ಪಟೇಲ್ (56) ಇಬ್ಬರು ಮಕ್ಕಳ ತಂದೆಯಾಗಿದ್ದು, ವೈಟ್‌ಹೆವೆನ್‌ನ ಅಮೆರಿಕಾಸ್ ಬೆಸ್ಟ್ ವ್ಯಾಲ್ಯೂ ಇನ್ ಆ್ಯಂಡ್ ಸ್ಯೂಟ್ಸ್‌ನಲ್ಲಿ ಹೌಸ್‌ಕೀಪರ್ ಆಗಿದ್ದರು.
ಸೋಮವಾರ ಈ ಘಟನೆ ನಡೆದಿದ್ದು, 30 ಗುಂಡುಗಳು ಹಾರಿದ್ದವು. ಈ ಪೈಕಿ ಒಂದು ಗುಂಡು ಮೊಟೆಲ್‌ನ ಹಿಂಭಾಗದಲ್ಲಿ ನಿಂತಿದ್ದ ಪಟೇಲ್ ಅವರ ಎದೆಯನ್ನು ಹೊಕ್ಕಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರು ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಖಂಡು ಕಳೆದ ಎಂಟು ತಿಂಗಳುಗಳಿಂದ ಬೆಸ್ಟ್ ವ್ಯಾಲ್ಯೂ ಇನ್‌ನಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಮತ್ತು ಮಕ್ಕಳೊಂದಿಗೆ ಮೊಟೆಲ್‌ನಲ್ಲಿ ವಾಸವಾಗಿದ್ದರು.
ಪಟೇಲ್ ಕುಟುಂಬ ಶೀಘ್ರವೇ ಹೊಸ ಉದ್ಯೋಗಕ್ಕಾಗಿ ಬೇರೆ ಕಡೆಗೆ ಸ್ಥಳಾಂತರಗೊಳ್ಳಲು ಸಜ್ಜಾಗಿತ್ತು ಎಂದು ಅವರ ಸಂಬಂಧಿ ಜಯ್ ಪಟೇಲ್ ತಿಳಿಸಿದರು.