ಕೊರಗರ ಬದುಕುವ ಹಕ್ಕಿನ ಮೇಲೆ ದಾಳಿ

Update: 2017-04-28 18:45 GMT

ಆಧುನಿಕ ದಿನಗಳಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನರಲ್ಲಿ ಅತೀ ಹೆಚ್ಚು ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತಿದೆ ಎನ್ನುವುದನ್ನು ವರದಿಗಳು ಹೇಳುತ್ತವೆ. ಆಧುನಿಕ ಕಾನೂನು, ಅರಣ್ಯ ನೀತಿ ಮೊದಲಾದವುಗಳ ಪರಿಣಾಮಗಳಿಂದ ಆದಿವಾಸಿಗಳು ಮತ್ತು ಬುಡಕಟ್ಟು ಜನರ ಬದುಕಿನಲ್ಲಿ ತೀವ್ರ ಏರುಪೇರುಗಳು ಕಂಡವು. ಅವರ ಆಹಾರ ಸರಪಣಿಯ ಮೇಲೂ ಅದು ದುಷ್ಪರಿಣಾಮ ಬೀರಿತು. ಅತ್ತ ನಾಡೂ ಇಲ್ಲದೆ, ಕಾಡೂ ಇಲ್ಲದೆ ಅವರು ನಡು ನೀರಲ್ಲಿದ್ದಾರೆ. ಇದು ಅವರನ್ನು ತೀವ್ರ ಬಡತನಕ್ಕೆ, ಹಸಿವೆಗೆ, ನಿರುದ್ಯೋಗಕ್ಕೆ ತಳ್ಳಿದೆ. ಈ ದೇಶದ ಆದಿವಾಸಿಗಳೂ ಸೇರಿದಂತೆ ತಳಸ್ತರದ ಬಹುಮುಖ್ಯ ಸಮಸ್ಯೆಯೇ ಪೌಷ್ಟಿಕ ಆಹಾರವಾಗಿದೆ.

ಇಂದು ಸಂಘಪರಿವಾರ ಆಹಾರದ ವಿಷಯದಲ್ಲಿ ನಡೆಸುತ್ತಿರುವ ರಾಜಕೀಯದ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಪೌಷ್ಟಿಕ ಆಹಾರ ಇನ್ನಷ್ಟು ತುಟ್ಟಿಯಾಗಲಿದೆ. ಅದರ ನೇರ ಬಲಿಪಶುಗಳು ಈ ದೇಶದ ತಳಸ್ತರದಲ್ಲಿ ಬದುಕುತ್ತಿರುವ ಜನರೇ ಆಗಿದ್ದಾರೆ. ಆಹಾರದ ರಾಜಕೀಯ ಸದ್ಯದ ದಿನಗಳಲ್ಲಿ ಎಷ್ಟು ನೀಚ ಮಟ್ಟಕ್ಕೆ ತಲುಪಿದೆ ಎನ್ನುವುದನ್ನು ಉಡುಪಿಯ ಗಂಗೊಳ್ಳಿ ಸಮೀಪ ನಡೆದ ಘಟನೆ ಹೇಳುತ್ತದೆ. ಎರಡು ದಿನಗಳ ಹಿಂದೆ, ಇಲ್ಲಿನ ತ್ರಾಸಿ ಗ್ರಾಮದ ಆನ್‌ಗೋಡಿನಲ್ಲಿರುವ ಕೊರಗ ಕಾಲನಿಗೆ ನುಗ್ಗಿರುವ ಸಂಘಪರಿವಾರದ ಕಾರ್ಯಕರ್ತರು, ಅಲ್ಲಿನ ಶುಭ ಕಾರ್ಯಕ್ರಮದಲ್ಲಿ ಗೋಮಾಂಸ ಮಾಡಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ಕಾರ್ಯಕ್ರಮವನ್ನು ತಡೆಯುವುದಕ್ಕೆ ಹವಣಿಸಿದ್ದಾರೆ. ಮಾತ್ರವಲ್ಲ, ಕೊರಗ ಯುವಕರನ್ನು ಪೊಲೀಸ್ ಠಾಣೆಗೆ ಎಳೆದೊಯ್ದು ಅವರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ.

ಅವಿಭಜಿತ ದ.ಕ.ದಲ್ಲಿ ಕೊರಗ ಸಮುದಾಯ ಅಳಿವಿನಂಚಿಲ್ಲಿದೆೆ. ಸರಕಾರದ ನೀತಿ, ಬಡತನ, ಜಾತಿ ವ್ಯವಸ್ಥೆ ಹೀಗೆ ಬೇರೆ ಬೇರೆ ಕಾರಣಗಳಿಂದ ಈ ಸಮುದಾಯ ಜರ್ಝರಿತಗೊಂಡಿದೆ. ಕೊರಗರೆಂದರೆ ನಮಗೆ ನೆನಪಾಗುವುದು ಅಜಲು ಪದ್ಧತಿ. ಉಗುರು, ಕೂದಲುಗಳ, ಎಂಜಲು ಅನ್ನದ ಸಹಿತ ತಮ್ಮೆಲ್ಲ ಕೆಡುಕುಗಳನ್ನು ಈ ಕೊರಗರಿಗೆ ಒಪ್ಪಿಸುವ ಪದ್ಧತಿಯೊಂದು ಅವಿಭಜಿತ ದಕ್ಷಿಣ ಕನ್ನಡದಲ್ಲಿತ್ತು. ಬಡತನದ ಕಾರಣದಿಂದಾಗಿ ಕೊರಗರು ಈ ಎಂಜಲಿಗೆ ಕೈಯೊಡ್ಡುವ ಸ್ಥಿತಿಯಿತ್ತು. ಆದರೆ ಪ್ರಗತಿಪರರ ಹೋರಾಟದ ಕಾರಣದಿಂದಾಗಿ ಅಜಲು ಪದ್ಧತಿ ಭಾಗಶಃ ನಿಂತಿದೆ. ಈಗಲೂ ಗುಟ್ಟಾಗಿ ಅಜಲು ಪದ್ಧತಿ ಚಾಲ್ತಿಯಲ್ಲಿದೆ ಎಂಬ ಆರೋಪಗಳೂ ಇವೆ.

ಈ ಕೊರಗರನ್ನು ಸಮಾಜ ಪ್ರತ್ಯೇಕ ಕಾಲನಿಯಲ್ಲಿಟ್ಟಿದೆ. ಅವರು ಸತ್ತಿದ್ದಾರೋ, ಬದುಕಿದ್ದಾರೋ ಎಂದು ವಿಚಾರಿಸಲು ಇಲ್ಲಿನ ಸ್ವಾಮೀಜಿಗಳಾಗಲಿ, ಸಂಘಪರಿವಾರದ ಮುಖಂಡರಾಗಲಿ ಈವರೆಗೆ ಈ ಕಾಲನಿಗೆ ತಲೆಹೊರಳಿಸಿದ್ದಿಲ್ಲ. ಕೃಷಿ ಮೊದಲಾದ ಸಾಂಪ್ರದಾಯಿಕ ಕೆಲಸಗಳು ಇವರಿಗೆ ತಿಳಿಯದ ಕಾರಣ, ಇವರು ಬರೇ ಕೂಲಿ ಕೆಲಸವನ್ನೇ ಅವಲಂಬಿಸಬೇಕಾಗಿದೆ. ಪ್ರತೀ ದಿನ ಶೋಷಣೆ, ಬಡತನದಲ್ಲೇ ಕಳೆಯುತ್ತಿದ್ದಾರೆ. ಕೊರಗರು ಈ ನೆಲದ ಮೂಲನಿವಾಸಿಗಳು. ಅಂದರೆ, ಈ ನೆಲದ ನಿಜವಾದ ಒಡೆಯರು. ಇಲ್ಲಿಯ ಸಂಸ್ಕೃತಿಯ ವಾರಸುದಾರರು. ಗೋಮಾಂಸ ಇವರ ಪ್ರಮುಖ ಆಹಾರ. ಒಂದಾನೊಂದು ಕಾಲದಲ್ಲಿ ದನಸಾಕುವ ಮೇಲ್‌ಜಾತಿಯ ಜನರಿಗೆ ತಮ್ಮ ದನ ಸತ್ತಾಗಷ್ಟೇ ಈ ಕೊರಗರ ನೆನಪಾಗುತ್ತಿತ್ತು.

ಕೊರಗರೆಂದಲ್ಲ, ದಲಿತರು ನೆನಪಾಗುವುದೂ ದನ ಸತ್ತಾಗ ಮಾತ್ರ. ಜೀವಂತವಿದ್ದಾಗ ದನದ ಹಾಲು, ಮೊಸರನ್ನು ಒಮ್ಮೆಯೂ ಇವರಿಗೆ ನೀಡದವರು, ದನ ಸತ್ತಾಗ ಅದನ್ನು ದಫನ ಮಾಡಲು ಕೊರಗರು ಬೇಕು. ಸತ್ತ ದನವನ್ನು ಕೊರಗರು ಮಾಂಸ ಮಾಡಿ ಎಲ್ಲರೂ ಆಹಾರಕ್ಕಾಗಿ ಬಳಸುತ್ತಿದ್ದರು. ಮೇಲ್‌ಜಾತಿಯವರಿಗೆ ದಫನ ಮಾಡುವ ಖರ್ಚು ಉಳಿಯಿತು. ಬಡ ದಲಿತರಿಗೆ ಆಹಾರ ಸಿಕ್ಕ ಸಂಭ್ರಮ. ಹೀಗೆ, ಗೋಮಾಂಸ ಇವರ ಬದುಕಿನಲ್ಲಿ ಅವಿನಾಭಾವವಾಗಿ ಬೆರೆತಿದೆ. ಗೋಮಾಂಸ ಕೊರಗರಿಗೆ ಪ್ರಿಯವಾಗಲು ಮುಖ್ಯ ಕಾರಣ, ಅವರಿಗೆ ಅತೀ ಕಡಿಮೆ ದರದಲ್ಲಿ ಸಿಗುವ ಪೌಷ್ಟಿಕ ಆಹಾರ ಎನ್ನುವುದೂ ಒಂದು. ದಲಿತರು ಮಾತ್ರವಲ್ಲ, ಬಡ ಮುಸ್ಲಿಮರೂ ಈ ಕಾರಣಕ್ಕಾಗಿಯೇ ಗೋಮಾಂಸವನ್ನು ಹೆಚ್ಚು ಬಳಸುತ್ತಾರೆ.

ಗೋಮಾಂಸ ಅತೀ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುವುದರಿಂದ ದಲಿತರು, ಕೊರಗರು ಮತ್ತು ಸಮಾಜದ ತಳಸ್ತರದ ಜನರ ಬದುಕನ್ನು ಒಂದಿಷ್ಟು ಸಹನೀಯ ಮಾಡಿದೆ. ಕಳೆದ ಮಂಗಳವಾರ ರಾತ್ರಿ ತ್ರಾಸಿ ಸಮೀಪದ ಗಾಣದ ಮಕ್ಕಿ ಕೊರಗಕಾಲನಿಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮವಿತ್ತು. ಸಹಜವೆಂಬಂತೆ ಶುಭ ಕಾರ್ಯಕ್ರಮಕ್ಕೆ ಅವರ ಪ್ರಮುಖ ಆಹಾರವಾಗಿರುವ ಗೋಮಾಂಸವನ್ನೇ ಮಾಡಿದ್ದಾರೆ. ಎಲ್ಲವೂ ಸಾಂಗವಾಗಿ ನೆರವೇರುತ್ತದೆ ಎನ್ನುವಾಗ, ಸ್ಥಳೀಯ ಸಂಘಪರಿವಾರದ ಕಾರ್ಯಕರ್ತರು ಆ ಕಾಲನಿಗೆ ದಾಳಿ ನಡೆಸಿದ್ದಾರೆ. ಶುಭಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದಲ್ಲದೆ, ಗೋಮಾಂಸದ ಹೆಸರಿನಲ್ಲಿ ಯುವಕರಿಗೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ಎಲ್ಲಕ್ಕಿಂತ ದುರಂತವೆಂದರೆ, ಅಲ್ಲಿನ ಕೆಲವು ಕೊರಗ ಯುವಕರನ್ನು ಠಾಣೆಗೆ ಎಳೆದೊಯ್ದು ಅವರ ಮೇಲೆ ಕೇಸು ಬೇರೆ ಜಡಿದಿದ್ದಾರೆ. ಒಂದೇ ಒಂದು ದಿನ ಕೊರಗ ಕಾಲನಿಗೆ ಇಣುಕಿ ಅವರು ಬದುಕಿದ್ದಾರೋ, ಊಟ ಮಾಡಿದ್ದಾರೋ ಎಂದು ವಿಚಾರಿಸದ ಈ ಸಂಘಪರಿವಾರದ ಕಾರ್ಯಕರ್ತರು ಇದೀಗ ಅವರು ಯಾವುದು ತಿನ್ನಬಾರದು, ತಿನ್ನಬೇಕು ಎನ್ನುವುದನ್ನು ಆದೇಶಿಸುವುದಕ್ಕೆ ಮುಂದಾಗಿದ್ದಾರೆ.

ಸಂಘಪರಿವಾರದ ದಾಳಿಗಿಂತಲೂ ಅಮಾನವೀಯವಾದುದು, ದಾಳಿಕೋರರನ್ನು ಬಂಧಿಸಬೇಕಾದ ಪೊಲೀಸರು ಹಲ್ಲೆಗೀಡಾದ ಕೊರಗರ ಮೇಲೆಯೇ ಪ್ರಕರಣದಾಖಲಿಸಿರುವುದು. ಕೊರಗರ ಕಾಲನಿಗೆ ದಾಳಿ ನಡೆಸಿದ ಸಂಘಪರಿವಾರ ಕಾರ್ಯಕರ್ತರ ಮೇಲೆ ಪೊಲೀಸರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಬೇಕಾಗಿತ್ತು. ಇದೀಗ ಸಂಘಪರಿವಾರದ ಜೊತೆಗೆ ಪೊಲೀಸರೂ ಕೈಜೋಡಿಸಿದಂತಾಗಿದೆ. ಕೊರಗ ಯುವಕರ ಮೇಲಿನ ಪ್ರಕರಣವನ್ನು ಹಿಂದಕ್ಕೆ ಪಡೆಯುವುದು ಮಾತ್ರವಲ್ಲ, ಅವರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರನ್ನು ತಕ್ಷಣ ಅಮಾನತು ಗೊಳಿಸಿ, ಈ ಬಗ್ಗೆ ತನಿಖೆ ನಡೆಸಬೇಕಾಗಿದೆ. ಕೊರಗರು ತಮ್ಮ ಮದುವೆ ಸಮಾರಂಭಗಳ ಕೋಳಿ, ಆಡಿನಂತಹ ದುಬಾರಿ ಮಾಂಸದ ಅಡುಗೆ ಮಾಡುವಂತಿಲ್ಲ. ಹೀಗಿರುವಾಗ, ತಮ್ಮ ಪ್ರಿಯವಾದ ಗೋಮಾಂಸದ ಅಡುಗೆ ಮಾಡಿದರೆ ಅದರಿಂದ ಸಂಘಪರಿವಾರಕ್ಕೇನು ನಷ್ಟವಾ? ಗೋವು ಪವಿತ್ರವೆಂದು ಸಂಘಪರಿವಾರ ಭಾವಿಸಿದರೆ ಅವರು ದಿನನಿತ್ಯ ಅದಕ್ಕೆ ಅರ್ಚನೆಗೈದು ಪೂಜೆ ಮಾಡಲಿ.

ಕೊರಗರು ಅದನ್ನು ತಿನ್ನಬೇಕೋ ಬೇಡವೋ ಎಂದು ತೀರ್ಮಾನಿಸುವ ಹಕ್ಕನ್ನು ಸಂಘಪರಿವಾರದ ದುಷ್ಕರ್ಮಿಗಳಿಗೆ ನೀಡಿದವರು ಯಾರು? ಸರಿ, ಆಡಿನ ಮಾಂಸವನ್ನೇ ಅವರು ಅಡುಗೆ ಮಾಡುತ್ತಾರೆ. ಅದನ್ನು ಗೋಮಾಂಸದ ದರದಲ್ಲಿ ಸಂಘಪರಿವಾರ ಕಾರ್ಯಕರ್ತರು ಒದಗಿಸುತ್ತಾರೆಯೇ? ಕೊರಗಕಾಲನಿಯಲ್ಲಿ ನಡೆದಿರುವುದು ಜಾತಿ ದೌರ್ಜನ್ಯ ಮಾತ್ರವಲ್ಲ, ಕೊರಗರ ಬದುಕುವ ಹಕ್ಕಿನ ಮೇಲೆ ನಡೆದ ದಾಳಿ ಇದಾಗಿದೆ. ತಕ್ಷಣ ಸರಕಾರ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಒತ್ತಡ ಹೇರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News