×
Ad

ಶಾಕಿಂಗ್ ನ್ಯೂಸ್: ಪೆಟ್ರೋಲ್ ದಂಧೆಯಲ್ಲಿ ಕೋಟಿ ಕೋಟಿ ಲೂಟಿ

Update: 2017-04-29 09:18 IST

ಲಕ್ನೋ, ಎ.29: ಪೆಟ್ರೋಲ್ ಪೂರೈಕೆ ಯಂತ್ರವನ್ನು ವಿರೂಪಗೊಳಿಸಿ, ಗ್ರಾಹಕರಿಗೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪೆಟ್ರೋಲ್ ನೀಡುವ ದಂಧೆಯನ್ನು ಅಧಿಕಾರಿಗಳು ಭೇದಿಸಿದ್ದಾರೆ. ಈ ಅಕ್ರಮ ದಂಧೆ ಮೂಲಕ ಉತ್ತರ ಪ್ರದೇಶದ ಪೆಟ್ರೋಲ್ ಪಂಪ್‌ಗಳು ತಿಂಗಳಿಗೆ 200 ಕೋಟಿ ರೂಪಾಯಿ ಕೊಳ್ಳೆಹೊಡೆಯುತ್ತಿವೆ ಎಂದು ಅಂದಾಜು ಮಾಡಲಾಗಿದೆ.

ಚಿಪ್ ಆಧರಿತ ಸಾಧನವನ್ನು ಪೆಟ್ರೋಲ್ ವಿತರಣಾ ಯಂತ್ರಕ್ಕೆ ಅಳವಡಿಸಲಾಗುತ್ತಿತ್ತು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಗುರುವಾರ ಏಳು ಪೆಟ್ರೋಲ್ ಪಂಪ್‌ಗಳ ಮೇಲೆ ದಾಳಿ ನಡೆಸಿದ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯ ಆರಂಭಿಕ ತನಿಖೆಯಿಂದ ತಿಳಿದುಬಂದಿರುವಂತೆ, ರಾಜ್ಯದ ಶೇಕಡ 80ರಷ್ಟು ಪೆಟ್ರೋಲ್ ಪಂಪ್‌ಗಳಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.

ವಿಶೇಷ ಕಾರ್ಯಪಡೆ ಈ ಸಂಬಂಧ ಪೆಟ್ರೋಲ್ ಪಂಪ್ ಮಾಲಕ, ಎಲೆಕ್ಟ್ರೀಶಿಯನ್ ಸೇರಿದಂತೆ 25 ಮಂದಿಯನ್ನು ಬಂಧಿಸಿದೆ. ಏಳು ಎಫ್‌ಐಆರ್ ದಾಖಲಿಸಲಾಗಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ. ಈ ಕಾರ್ಯಾಚರಣೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
"ರಾಜ್ಯದ ಶೇಕಡ 80ರಷ್ಟು ಪೆಟ್ರೋಲ್ ಪಂಪ್‌ಗಳಲ್ಲಿ ಈ ವಂಡರ್ ಚಿಪ್ ಅಳವಡಿಸಲಾಗಿದೆ. ಈ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ" ಎಂದು ಎಸ್‌ಟಿಎಫ್‌ನ ಹಿರಿಯ ಅಧೀಕ್ಷಕ ಅಮಿತ್ ಪಾಠಕ್ ಹೇಳಿದ್ದಾರೆ. ಎಲ್ಲ ಏಳು ಪೆಟ್ರೋಲ್ ಪಂಪ್‌ಗಳನ್ನು ಮುಚ್ಚಲಾಗಿದ್ದು, 14 ಮಂದಿಯನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಉಪ ಅಧೀಕ್ಷಕ ಅರವಿಂದ್ ಚತುರ್ವೇದಿ ವಿವರಿಸಿದ್ದಾರೆ.

ಪೆಟ್ರೋಲ್ ವಿತರಣಾ ಯಂತ್ರಕ್ಕೆ ಚಿಪ್ ಅಳವಡಿಸುತ್ತಿದ್ದ ರಾಜೇಂದ್ರ ಎಂಬಾತನನ್ನು ಸುಳಿವಿನ ಆಧಾರದಲ್ಲಿ ಬಂಧಿಸಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಿ ಬಾರಿ ಗ್ರಾಹಕರು ಪೆಟ್ರೋಲ್ ಹಾಕಿಸಿಕೊಳ್ಳುವಾಗ ಕೂಡಾ ನಿರ್ದಿಷ್ಟ ಪ್ರಮಾಣದ ಪೆಟ್ರೋಲ್ ಉಳಿಸಿ ಅಕ್ರಮ ಲಾಭ ಗಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಜಿಲ್ಲೆ ಮಾತ್ರವಲ್ಲದೇ ರಾಜ್ಯದ ನೂರಾರು ಪೆಟ್ರೋಲ್ ಪಂಪ್‌ಗಳಿಗೆ ಮತ್ತು ಹೊರರಾಜ್ಯದ ಪೆಟ್ರೋಲ್ ಪಂಪ್‌ಗಳಿಗೂ ಈ ಚಿಪ್ ಅಳವಡಿಸುತ್ತಿದ್ದುದಾಗಿ ರಾಜೇಂದ್ರ ಒಪ್ಪಿಕೊಂಡಿದ್ದಾನೆ.

ಪೆಟ್ರೋಲ್ ವಿತರಣಾ ಯಂತ್ರಕ್ಕೆ ಈ ಚಿಪ್ ಅಳವಡಿಸಿದಾಗ ಶೇಕಡ 5ರಿಂದ 10ರಷ್ಟು ಕಡಿಮೆ ಪೆಟ್ರೋಲ್ ಹರಿಯುತ್ತದೆ. ರಿಮೋಟ್ ಕಂಟ್ರೋಲ್ ಆಧರಿತ ಸಾಧನ ಅಳವಡಿಸಿ, ಮಿತಿಯನ್ನು ನಿಗದಿಪಡಿಸಲಾಗುತ್ತದೆ. ಸರಾಸರಿ ಒಂದು ಲೀಟರ್ ಪೆಟ್ರೋಲ್ ಹಾಕಿಸುವ ಗ್ರಾಹಕರಿಗೆ 940 ಮಿಲಿಲೀಟರ್ ಮಾತ್ರ ಸಿಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಚಿಪ್‌ಗೆ 30 ರಿಂದ 40 ಸಾವಿರ ರೂಪಾಯಿ ಬೆಲೆ ಇದ್ದು, ಇದನ್ನು ಅಳವಡಿಸಿದ್ದಕ್ಕೆ ಎಲೆಕ್ಟ್ರೀಶಿಯನ್ 5 ರಿಂದ 10 ಸಾವಿರ ಶುಲ್ಕ ವಿಧಿಸುತ್ತಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News