ಇನ್ನು ಮುಂದೆ ರಾಜಸ್ಥಾನದ ಗ್ರಂಥಾಯಲಗಳಲ್ಲಿ ಪರಶುರಾಮ
ಜೈಪುರ, ಎ.29: ರಾಜಸ್ಥಾನದ ಎಲ್ಲ ಸಾರ್ವಜನಿಕ ಗ್ರಂಥಾಲಯಗಳಿಗೆ ಪರಶುರಾಮನ ಕುರಿತ ಪುಸ್ತಕಗಳನ್ನು ಖರೀದಿಸುವಂತೆ ಶಿಕ್ಷಣ ಸಚಿವ ವಾಸುದೇವ ದೇವನಾನಿ ಆದೇಶಿಸಿದ್ದಾರೆ. ಅಂತೆಯೇ ನೈತಿಕ ಶಿಕ್ಷಣ ಪಠ್ಯದಲ್ಲಿ ಹಿಂದೂ ದೇವತೆಗಳ ಬಗ್ಗೆ ಒಂದು ಅಧ್ಯಾಯವನ್ನು ಸೇರಿಸಲು ಕೂಡಾ ಸಚಿವರು ಸೂಚಿಸಿದ್ದಾರೆ.
ವಿಪ್ರ ಫೌಂಡೇಷನ್ ಎಂಬ ಬ್ರಾಹ್ಮಣ ಸಂಘಟನೆ ಪರಶುರಾಮ ಜಯಂತಿ ಸಂದರ್ಭದಲ್ಲಿ ದೇವನಾನಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ಕೆಲವೇ ಗಂಟೆಗಳಲ್ಲಿ ಈ ಘೋಷಣೆ ಹೊರಬಿದ್ದಿದೆ.
"ವೀರ, ವೀರಾಂಗನೆಯರ ಸ್ಫೂರ್ತಿದಾಯಕ ಕಥೆಗಳನ್ನು ಪಠ್ಯದಲ್ಲಿ ಸೇರಿಸಲು ಪ್ರಯತ್ನ ಮಾಡಲಾಗುವುದು. ಇಡೀ ಪ್ರಯತ್ನದ ಭಾಗ ಈ ಸೇರ್ಪಡೆ. ಪರಶುರಾಮನ ಜೀವನ ಕುರಿತ ಕೃತಿಗಳು ಸದ್ಯದಲ್ಲೇ ಗ್ರಂಥಾಲಗಳನ್ನು ತಲುಪಲಿವೆ" ಎಂದು ದೇವನಾನಿ ವಿವರಿಸಿದ್ದಾರೆ. ನೈತಿಕ ವಿಜ್ಞಾನ ಪಠ್ಯದಲ್ಲೂ ಪರಶುರಾಮನ ಸ್ಫೂರ್ತಿದಾಯಕ ಜೀವನ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುವಂತೆ ಒಂದು ಅಧ್ಯಾಯ ಸೇರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪುಸ್ತಕಗಳಿಗೆ ಸಚಿವರ ವಿವೇಚನಾ ನಿಧಿಯಿಂದ ನೆರವು ನೀಡಲಾಗುತ್ತದೆ. ಪಂಡಿತ ಎಂಬ ಸರ್‌ನೇಮ್ ಅನ್ನು ಬ್ರಾಹ್ಮಣರು ಬಳಸುವುದನ್ನು ಆಕ್ಷೇಪಿಸಿ ದೇವನಾನಿ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದ್ದರು. ಅಗತ್ಯ ಅರ್ಹತೆ ಇಲ್ಲದಿದ್ದರೂ ಪ್ರೊಫೆಸರ್ ಎಂದು ಹೆಸರಿನ ಜತೆ ಸಚಿವರು ಸೇರಿಸಿಕೊಳ್ಳುವುದನ್ನು ಪ್ರಶ್ನಿಸಿ, ಸಲ್ಲಿಕೆಯಾದ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್, ದೇವನಾನಿಯವರಿಗೆ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಯಾಗಿ ಸಚಿವರು, ಪಾಂಡಿತ್ಯ ಇಲ್ಲದಿದ್ದರೂ, ಬ್ರಾಹ್ಮಣರು ಪಂಡಿತ ಎಂದು ಹೆಸರಿನ ಮುಂದೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದ್ದರು.
ಕೆಲ ಬ್ರಾಹ್ಮಣ ಸಂಘಟನೆಗಳು ಇದನ್ನು ವಿರೋಧಿಸಿ, ಅವರ ಪ್ರತಿಕೃತಿ ದಹಿಸಿದ್ದವು. ಅವರು ರಾಜೀನಾಮೆ ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿತ್ತು. ಬ್ರಾಹ್ಮಣರನ್ನು ಸಮಾಧಾನಪಡಿಸುವ ಸಲುವಾಗಿ ಸಚಿವರು ಈ ಕ್ರಮ ಕೈಗೊಂಡಿದ್ದಾರೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಆಕ್ಷೇಪಿಸಿದೆ