×
Ad

ಪ್ರಯಾಣಿಕನನ್ನು ನಿದ್ದೆಯಿಂದ ಎಬ್ಬಿಸದ ತಪ್ಪಿಗೆ 5,000 ರೂ. ದಂಡ ತೆತ್ತ ರೈಲ್ವೇಸ್!

Update: 2017-04-29 10:32 IST

ಭೋಪಾಲ್, ಎ.29: ಪ್ರಯಾಣಿಕನನ್ನು ನಿದ್ದೆಯಿಂದ ಎಬ್ಬಿಸದ ತಪ್ಪಿಗೆ ರೈಲ್ವೇಸ್ 5,000 ರೂ. ದಂಡ ತೆತ್ತ ಅಪರೂಪದ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ.

ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ವಕೀಲ ವೃತ್ತಿಯಲ್ಲಿರುವ ಗಿರೀಶ್ ಗಾರ್ಗ್ ಎಂಬುವವರು ರೈಲ್ವೇಸ್ ವಿರುದ್ಧ ದೂರು ಸಲ್ಲಿಸಿ ಪರಿಹಾರವನ್ನು ಪಡೆಯಲು ಸಫಲರಾಗಿದ್ದಾರೆ.

  2015ರ ಜೂ.13 ರಂದು ಕೊಯಮತ್ತೂರು-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೋಟಾದತ್ತ ಪ್ರಯಾಣಿಸುತ್ತಿದ್ದ ಗಾರ್ಗ್‌ರನ್ನು ರೈಲ್ವೇಸ್‌ನ ಕಸ್ಟಮರ್ ಕೇರ್‌ನವರು ನಿದ್ದೆಯಿಂದ ಎಬ್ಬಿಸದೇ ನಿರ್ಲಕ್ಷವಹಿಸಿದ್ದಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರು. ಮಾನಸಿಕವಾಗಿ ಕಿರುಕುಳ ನೀಡಿದ ಕಾರಣಕ್ಕೆ 20,000 ರೂ. ದಂಡ ತೆರಬೇಕೇಂದು ರೈಲ್ವೇಸ್‌ಗೆ ಆದೇಶ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು.

 ರೈಲ್ವೇಸ್‌ನ ಕಸ್ಟಮರ್ ಕೇರ್ ಸಂಖ್ಯೆ 139ಕ್ಕೆ ಕರೆ ಮಾಡಿದ್ದ ಗಾರ್ಗ್ ತಾನು ಇಳಿಯುವ ಸ್ಟೇಶನ್ ಬಂದ ತಕ್ಷಣ ಎಬ್ಬಿಸುವಂತೆ ವಿನಂತಿಸಿಕೊಂಡಿದ್ದರು. ಗಾರ್ಗ್ ಮನವಿಯನ್ನು ಸ್ವೀಕರಿಸಿದ ರೈಲ್ವೇಸ್‌ನ ಕಸ್ಟಮರ್ ಕೇರ್ ಅಧಿಕಾರಿ ಅವರ ಮನವಿಯನ್ನು ದಾಖಲಿಸಿಕೊಂಡಿದ್ದರು. ಕಸ್ಟಮರ್ ಕೇರ್ ಮೇಲೆ ನಂಬಿಕೆ ಇರಿಸಿದ್ದ ಗಾರ್ಗ್ ರೈಲಿನ ಪ್ರಯಾಣದ ವೇಳೆ ನಿದ್ದೆ ಹೋಗಿದ್ದಾರೆ. ಪಕ್ಕದಲ್ಲಿವವರು ಅವರನ್ನು ಎಬ್ಬಿಸಿ ಕೋಟಾ ಸ್ಟೇಶನ್‌ನಲ್ಲಿ ಇಳಿಯುವಂತೆ ಮಾಡಿದ್ದಾರೆ. ಆದರೆ ರೈಲ್ವೇಸ್ ವತಿಯಿಂದ ಅವರಿಗೆ ಯಾವುದೇ ಸಹಾಯ ಲಭಿಸಿರಲಿಲ್ಲ.

ರೈಲ್ವೇಸ್‌ನ ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿದ ಗಾರ್ಗ್ ಗ್ರಾಹಕ ವ್ಯಾಜ್ಯ ಇತ್ಯರ್ಥ ನ್ಯಾಯಾಲಯ ಮೊರೆ ಹೋಗಿದ್ದರು. ಆ ಬಳಿಕ ನ್ಯಾಯಾಲಯದ ಮೆಟ್ಟಿಲೇರಿದರು.

ನಾವು 139 ಸಂಖ್ಯೆಯ ಸೇವೆಗೆ ಶುಲ್ಕ ವಿಧಿಸುವುದಿಲ್ಲ. ನಮ್ಮ ಸೇವೆಯಲ್ಲಿ ವ್ಯತ್ಯಯವಾಗಿಲ್ಲ. ನ್ಯಾಯಾಲಯವು ತನ್ನ ವಿರುದ್ಧದ ದೂರನ್ನು ತಿರಸ್ಕರಿಸಬೇಕು ಎಂದು ರೈಲ್ವೇಸ್ ವಾದಿಸಿತ್ತು.

 ಗಾರ್ಗ್ ಅರ್ಜಿಯನ್ನು ಎತ್ತಿ ಹಿಡಿದ ನ್ಯಾಯಾಲಯ ಮಾನಸಿಕವಾಗಿ ಹಿಂಸೆ ನೀಡಿದ್ದಕ್ಕೆ 5000 ರೂ. ಹಾಗೂ ಗಾರ್ಗ್‌ರ ನ್ಯಾಯಾಲಯದ ಖಚು-ವೆಚ್ಚ 2000 ರೂ. ವನ್ನು ಭರಿಸಬೇಕೆಂದು ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News