×
Ad

ಕಾರ್ತಿಕ್‌ರಾಜ್ ಕೊಲೆ ಪ್ರಕರಣ: ಸಹೋದರಿ, ಆಕೆಯ ಪ್ರಿಯತಮ ಸಹಿತ ಮೂವರ ಬಂಧನ

Update: 2017-04-29 12:05 IST

ಮಂಗಳೂರು, ಎ. 29: ಪಜೀರು ಸುದರ್ಶನ ನಗರದ ನಿವಾಸಿ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾರ್ತಿಕ್‌ರಾಜ್‌ರ ಸಹೋದರಿ ಮತ್ತು ಆಕೆಯ ಪ್ರಿಯತಮ ಸಹಿತ ಮೂವರನ್ನು ಬಂಧಿಸಿದ್ದಾರೆ.

ಕಾರ್ತಿಕ್‌ರಾಜ್‌ರ ಸಹೋದರಿ ಕಾವ್ಯಾಶ್ರೀ, ಆಕೆಯ ಪ್ರಿಯತಮ ಪಂಡಿತ್‌ಹೌಸ್ ಸಂತೋಷನಗರ ನಿವಾಸಿ ಗೌತಮ್ (26) ಮತ್ತು ಗೌತಮ್‌ನ ಸಹೋದರ ಗೌರವ್ (19) ಬಂಧಿತ ಆರೋಪಿಗಳು. ಕಾವ್ಯಾಶ್ರೀ ಅವರಿಗೆ ವಿವಾಹವಾಗಿದ್ದು, ಪತಿ ದುಬೈಯಲ್ಲಿ ಉದ್ಯೋಗಿಯಾಗಿದ್ದಾರೆ. ಪತಿ-ಪತ್ನಿಯರ ನಡುವಿನ ಸಂಬಂಧ ಸರಿಹೊಂದುತ್ತಿರಲಿಲ್ಲ. ಇವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಇದನ್ನು ಕಾವ್ಯಾ ತನ್ನ ಸಹೋದರ ಕಾರ್ತಿಕ್‌ರಾಜ್ ಬಳಿಯಲ್ಲಿ ಹೇಳಿ ತಾಯಿ ಮನೆಗೆ ಬಂದಿದ್ದಳೆನ್ನಲಾಗಿದೆ. ಆದರೂ ಕಾರ್ತಿಕ್ ತನ್ನ ಸಹೋದರಿಗೆ ಬುದ್ಧಿವಾದ ಹೇಳಿ ಗಂಡನ ಮನೆಗೆ ಕಳುಹಿಸಿದ್ದರು. ಮತ್ತೆ ಅದೇ ಮನೆಯವರ ಕಿರುಕುಳದಿಂದ ಬೇಸತ್ತ ಕಾವ್ಯಾ ತಾಯಿ ಮನೆಗೆ ಬಂದಿದ್ದು, ಈ ಸಂದರ್ಭದಲ್ಲಿ ಕಾರ್ತಿಕ್ ಮನೆಗೆ ಬಾರದಂತೆ ಹೇಳಿದ್ದರೆನ್ನಲಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿ ಕಾರ್ತಿಕ್‌ರಾಜ್ ಮತ್ತು ಕಾವ್ಯಾಶ್ರೀ ನಡುವೆ ಜಗಳವಾಗುತ್ತಿತ್ತು. ಕೊನೆಗೂ ಕಾರ್ತಿಕ್ ತನ್ನ ಸಹೋದರಿಗೆ ಕುತ್ತಾರ್‌ನಲ್ಲಿ ಬಾಡಿಗೆ ಮನೆಯೊಂದಕ್ಕೆ ಮಾಡಿ ಅಲ್ಲೇ ಇರುವಂತೆ ಹೇಳಿದ್ದರೆಂದು ಮೂಲಗಳು ತಿಳಿಸಿವೆ. ಈ ನಡುವೆ ಕೆಲಸಕ್ಕೆ ಹೋಗುತ್ತಿದ್ದ ಕಾವ್ಯಾಶ್ರೀಗೆ ಅಲ್ಲಿ ಗೌತಮ್ ಎಂಬಾತನ ಪರಿಚಯವಾಗಿದೆ. ಈ ಪರಿಚಯವು ಪ್ರೇಮಕ್ಕೆ ತಿರುಗಿದ್ದು, ಈ ವಿಚಾರ ಕಾರ್ತಿಕ್‌ಗೆ ತಿಳಿದಿತ್ತು. ಇದರಿಂದ ಸಹೋದರಿಯನ್ನು ಕಾರ್ತಿಕ್ ತರಾಟೆಗೆ ತೆಗೆದುಕೊಳ್ಳುತ್ತಿದ್ದ. ಕಾರ್ತಿಕ್ ವರ್ತನೆಯಿಂದ ಬೇಸತ್ತ ಕಾವ್ಯಾ ಅಣ್ಣನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಗೌತಮ್ ನೊಂದಿಗೆ ಮಾತನಾಡಿ, ಯೋಜನೆಯನ್ನು ರೂಪಿಸಿದ್ದಳೆನ್ನಲಾಗಿದೆ. ಇದನ್ನು ಒಪ್ಪಿಕೊಂಡ ಗೌತಮ್, ಕಾರ್ತಿಕ್‌ಗೆ ಹಲ್ಲೆ ನಡೆಸಲು ಸುಪಾರಿ ನೀಡಬೇಕಿದ್ದು, ಅದಕ್ಕೆ ಹಣದ ಅಗತ್ಯ ಇದೆ ಎಂದಿದ್ದ. ಒಂದು ಲಕ್ಷ ರೂ. ನೀಡುವುದಾಗಿ ಕಾವ್ಯಾ ಮೊದಲು ಒಪ್ಪಿಕೊಂಡಿದ್ದಳು. ಆದರೆ ಗೌತಮ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು, ಸುಮಾರು 4 ರಿಂದ 5 ಲಕ್ಷ ರೂ. ವರೆಗೆ ಬೇಡಿಕೆ ಇಟ್ಟಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಣಕ್ಕಾಗಿ ಸಹೋದರನನ್ನೇ ಬಳಸಿ ಕೊಲೆ ಮಾಡಿದ!

ಗೌತಮ್ ಮನೆಯೊಂದನ್ನು ಕಟ್ಟುತ್ತಿದ್ದು, ಇದಕ್ಕಾಗಿ ಆತನಿಗೆ ಹಣದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ಆತ ಸುಪಾರಿ ಹಂತಕರನ್ನು ಪರಿಚಯಿಸದೇ ಸ್ವತಃ ತಾನೇ ಕುಕೃತ್ಯಕ್ಕೆ ಕೈ ಹಾಕಿದ. ಇದಕ್ಕಾಗಿ ಆತ ತನ್ನ ಕಿರಿಯ ಸಹೋದರನಾಗಿರುವ ಗೌರವ್‌ನನ್ನು ಬಳಸಿಕೊಂಡು ಕಾರ್ತಿಕ್‌ರಾಜ್‌ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ.

ಕೊಲೆ ಮಾಡುವ ಉದ್ದೇಶ ಹೊಂದಿದರಲಿಲ್ಲ

ಕಾವ್ಯಾಶ್ರೀಗೆ ತನ್ನ ಸಹೋದರನನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಲಾಗಿದೆ. ಆದರೆ, ತನಗೆ ಕಂಟಕನಾಗಿದ್ದ ಸಹೋದರನ ಕೈ ಕಾಲು ಮುರಿದು ಮನೆಯಲ್ಲೇ ಇರುವಂತೆ ಮಾಡಬೇಕೆಂದು ನಿರ್ಧರಿಸಿ ಗೌತಮ್ ಗೆ ಹೊಡೆಸಲು ಸುಪಾರಿ ನೀಡಿದ್ದಳೆನ್ನಲಾಗಿದೆ. ಆದರೆ, ಗೌತಮ್  ಕಾರ್ತಿಕ್ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆಯು ಕಾರ್ತಿಕ್‌ನನ್ನು ಇಹಲೋಕ ಶಾಶ್ವತವಾಗಿ ತ್ಯಜಿಸುವಂತೆ ಮಾಡಿತ್ತು. ಎಂಜಿನಿಯರಿಂಗ್ ಪದವೀಧರನಾಗಿದ್ದ ಕಾರ್ತಿಕ್‌ರಾಜ್‌ರ ಮೇಲೆ 2016ರ ಅ.22ರಂದು ಕೊಣಾಜೆಯ ಗಣೇಶ್ ಮಹಲ್ ಬಳಿ ಮಾರಣಾಂತಿಕ ಹಲ್ಲೆ ನಡೆದಿತ್ತು. ಬಳಿಕ ಸ್ಥಳೀಯರೊಬ್ಬರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾರನೆ ದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಬೆಳಗ್ಗೆ ಹೊತ್ತಿಗೆ ಜಿಮ್‌ಗೆ ತೆರಳುತ್ತಿದ್ದ ಕಾರ್ತಿಕ್ ಎಂದಿನಂತೆ ಅ. 22ರಂದು ಕೂಡ ಜಿಮ್‌ಗೆಂದು ಮನೆಯಿಂದ ಹೊರಟಿದ್ದರು. ಕಾರ್ತಿಕ್ ಹತ್ಯೆಗೀಡಾಗುವ ಮೂರು ದಿನಗಳ ಮುನ್ನ ಗೌತಮ್  ಕಾರ್ತಿಕ್‌ನ ಚಲನವಲನದ ಮೇಲೆ ಕಣ್ಣಿಟ್ಟಿದ್ದ. ಆತನನ್ನು ಗುರುತಿಸಲು ಜಿಮ್‌ಗೂ ಒಮ್ಮೆ ಭೇಟಿ ನೀಡಿದ್ದ ಎಂದು ಹೇಳಲಾಗಿದೆ.

 ಅ .22ರಂದು ಬೈಕ್‌ನಲ್ಲಿ ಆಗಮಿಸಿದ ಇಬ್ಬರು ಗಣೇಶ್ ಮಹಲ್ ಬಳಿ ವಿಳಾಸ ಕೇಳುವ ನೆಪದಲ್ಲಿ ಕಾರ್ತಿಕ್‌ನನ್ನು ತಡೆದು, ಆತನ ಮೇಲೆ ಖಾರದ ಹುಡಿ ಎರಚಿ ರಾಡ್‌ನಿಂದ ಹಲ್ಲೆ ನಡೆಸಿದ್ದರು. ಪ್ರಾರಂಭದಲ್ಲಿ ಇದು ಅಪಘಾತವೆಂದೇ ಪರಿಗಣಿಸಲಾಗಿತ್ತು. ವೈದ್ಯಕೀಯ ವರದಿ ಮತ್ತು ತನಿಖೆಯ ಬಳಿಕ ಇದು ಅಪಘಾತವಲ್ಲ ಕೊಲೆ ಎಂದು ದೃಢಪಟ್ಟಿತ್ತು.

ವಿಶೇಷ ತಂಡ ರಚನೆ

ಕಾರ್ತಿಕ್‌ರಾಜ್ ಹತ್ಯೆಯ ತನಿಖೆ ಚುರುಕುಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿದ್ದರು. ತನಿಖೆಗೆ ಚುರುಕುಗೊಳಿಸಿರುವ ಪೊಲೀಸ್ ತಂಡ ಸಿಸಿಬಿ ಹಾಗೂ ಕೊಣಾಜೆ ಪೊಲೀಸರ ಸಹಕಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಕೋಮುದ್ವೇಷ ಹರಡುವ ಸಂಚು ವಿಫಲ:

ಕಾರ್ತಿಕ್ ರಾಜ್ ಹತ್ಯೆ ಸುದ್ದಿಯಾಗುತ್ತಿದ್ದಂತೆ ಸಮಾಜಘಾತುಕರು, ದುಷ್ಕರ್ಮಿಗಳು, ಕೆಲ ಸಂಘಟನೆಗಳು ಇದು ಕೋಮುದ್ವೇಷದಿಂದ ನಡೆದ ಕೊಲೆ ಎಂಬುದಾಗಿ ಬಿಂಬಿಸಲು ಆರಂಭಿಸಿತ್ತು. ಪೊಲೀಸರ ಕಾರ್ಯಾಚರಣೆಯಿಂದ ನೈಜ ಆರೋಪಿಗಳ ಬಂಧನವಾಗಿದ್ದು, ಕೋಮುದ್ವೇಷ ಹರಡುವ ಸಮಾಜಘಾತುಕರ ಸಂಚು ವಿಫಲವಾಗಿದೆ.

ಸಂಘಪರಿವಾರ ಸಂಘಟನೆಗಳಿಂದ ಪ್ರತಿಭಟನೆ

ಕಾರ್ತಿಕ್‌ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಂಘಪರಿವಾರ ಸಂಘಟನೆಗಳು ಈ ಹಿಂದೆ ಹಲವು ಪ್ರತಿಭಟನೆಗಳನ್ನು ನಡೆಸಿದ್ದವು. ಕಾರ್ತಿಕ್ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಕೊಣಾಜೆ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿತ್ತು. ತಿಂಗಳ ಹಿಂದೆಯೂ ಕೊಣಾಜೆ ಠಾಣೆಯ ಮುಂದೆ ಧರಣಿ ನಡೆಸಿದ ಸಂಘಟನೆಯೊಂದು ಕಾರ್ತಿಕ್ ಹಂತಕರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿತ್ತು.

ಕಾರ್ತಿಕ್ ಮನೆಗೆ ಪ್ರಮುಖರ ಭೇಟಿ
ಕಾರ್ತಿಕ್ ಹತ್ಯೆ ಬಳಿಕ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಕಲ್ಲಡ್ಕ ಪ್ರಭಾಕರ ಭಟ್ ಮೊದಲಾದವರು ಭೇಟಿ ನೀಡಿದ್ದರು.

ಜಿಲ್ಲೆಗೆ ಬೆಂಕಿ ಹಚ್ಚುವ ಬೆದರಿಕೆ
ಈ ನಡುವೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರತಿಭಟನೆಯೊಂದನ್ನು ಉದ್ದೇಶಿಸಿ ಮಾತನಾಡಿ, ಕಾರ್ತಿಕ್ ರಾಜ್ ಕೊಲೆಯಲ್ಲಿ ಕೇರಳದ ಉಗ್ರ ಸಂಘಟನೆಯ ನಂಟಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ, ದ.ಕ. ಜಿಲ್ಲೆಗೆ ಬೆಂಕಿ ಇಡುವ ಬಗ್ಗೆಯೂ ಬೆದರಿಕೆ ನೀಡಿದ್ದರು. ಸಂಸದರ ಈ ಹೇಳಿಕೆಯು ವಿವಾದವನ್ನು ಎಬ್ಬಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News