ಆರ್‌ಸಿಬಿಗೆ ಐಪಿಎಲ್ ಪ್ಲೇ-ಆಫ್‌ಗೆ ತಲುಪಲು ಈಗಲೂ ಇದೆ ಅವಕಾಶ!

Update: 2017-04-29 07:09 GMT

ಬೆಂಗಳೂರು, ಎ.29: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ರಸ್ತುತ 9 ಪಂದ್ಯಗಳಲ್ಲಿ 5 ಅಂಕಗಳನ್ನು ಗಳಿಸಿದ್ದು, ಪ್ಲೇ-ಆಫ್‌ಗೆ ಅರ್ಹತೆ ಪಡೆಯುವುದು ಕನಸಾಗಿ ಉಳಿದಿದೆೆ. ಆದಾಗ್ಯೂ ಅಂಕಿ-ಅಂಶಗಳನ್ನು ಅವಲೋಕಿಸಿದಾಗ ಆರ್‌ಸಿಬಿಗೆ ಪ್ಲೇ-ಆಫ್ ಹಂತಕ್ಕೆ ಸ್ಪರ್ಧೆಯೊಡ್ಡುವ ಅವಕಾಶ ಈಗಲೂ ಇದೆ.

 ಆರ್‌ಸಿಬಿ ತಂಡ ಉಳಿದ ಎಲ್ಲ 5 ಪಂದ್ಯಗಳನ್ನು ಜಯಿಸಿದರೆ 15 ಅಂಕ ಗಳಿಸುತ್ತದೆ. ಅಗ್ರ-4ರಲ್ಲಿ ಸ್ಥಾನ ಪಡೆಯಲು ಸಾಧ್ಯವಿದೆ. ಆರ್‌ಸಿಬಿ ಮತ್ತೊಂದು ಸೋಲು ಅನುಭವಿಸಿದರೆ 13 ಅಂಕ ಗಳಿಸುತ್ತದೆ. ಆಗಲೂ ಪ್ಲೇ-ಆಫ್‌ಗೆ ತಲುಪುವ ಅವಕಾಶ ಮುಕ್ತವಾಗಿರುತ್ತದೆ.

 ಈ ವರ್ಷದ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಅಂಕಪಟ್ಟಿಯಲ್ಲಿ ಈಗಾಗಲೇ ಅಗ್ರ-2ರಲ್ಲಿ ಸ್ಥಾನ ಪಡೆದಿದ್ದು, ಸನ್‌ರೈಸರ್ಸ್ ಹೈದರಾಬಾದ್ 3ನೆ ಸ್ಥಾನದಲ್ಲಿದೆ. ಒಂದು ವೇಳೆ ಈ ಮೂರು ತಂಡಗಳು ಗೆಲುವಿನ ಓಟ ಮುಂದುವರಿಸಿದರೆ, ಉಳಿದ ತಂಡಗಳು ಸೋಲು ಕಂಡರೆ, ಆರ್‌ಸಿಬಿ 13 ಅಂಕ ಗಳಿಸಿದರೆ ಮುಂದಿನ ಸುತ್ತಿಗೆ ತಲುಪಲು ಅವಕಾಶವಿರುತ್ತದೆ.

 ಪ್ರಸ್ತುತ 9 ಪಂದ್ಯಗಳನ್ನು ಆಡಿರುವ ಕೆಕೆಆರ್ 14 ಅಂಕ ಗಳಿಸಿದ್ದು, ಉಳಿದ 5 ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿದರೆ 20 ಅಂಕ ಗಳಿಸುತ್ತದೆ. ಮುಂಬೈ ಉಳಿದ ಆರರಲ್ಲಿ ಮೂರು ಪಂದ್ಯ ಜಯಿಸಿದರೆ 18 ಅಂಕ ತಲುಪುತ್ತದೆ.

ಸನ್‌ರೈಸರ್ಸ್ ತಂಡ ಉಳಿದ 5 ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿದರೆ 17 ಅಂಕ ಗಳಿಸುತ್ತದೆ. ಒಂದು ವೇಳೆ ಪುಣೆ ತಂಡ ಉಳಿದ 6 ಪಂದ್ಯಗಳಲ್ಲಿ 5ರಲ್ಲಿ ಸೋತರೆ 10 ಅಂಕ ಗಳಿಸುತ್ತದೆ. ಗುಜರಾತ್ ಲಯನ್ಸ್ ಹಾಗೂ ಡೆಲ್ಲಿ ತಂಡ ಉಳಿದ ಪಂದ್ಯಗಳಲ್ಲಿ ತಲಾ 3ರಲ್ಲಿ ಜಯ ಸಾಧಿಸಿದರೆ, ಪಂಜಾಬ್ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಐಪಿಎಲ್‌ನ ಅಂತಿಮ ಅಂಕಪಟ್ಟಿ ಹೀಗಿರುತ್ತದೆ...

ಕೆಕೆಆರ್-20, ಮುಂಬೈ-18, ಸನ್‌ರೈಸರ್ಸ್-17, ಆರ್‌ಸಿಬಿ-15, ಗುಜರಾತ್-12, ಪುಣೆ, ಪಂಜಾಬ್ ಹಾಗೂ ಡೆಲ್ಲಿ-ತಲಾ 10 ಅಂಕ ಗಳಿಸುತ್ತವೆ.

 ಇದರರ್ಥ ಆರ್‌ಸಿಬಿ ಇನ್ನೂ ಒಂದು ಪಂದ್ಯ ಸೋತರೂ, ರನ್‌ರೇಟ್ ಹಂಗಿಲ್ಲದೆ ಮುಂದಿನ ಸುತ್ತಿಗೇರಬಹುದು. ಆದರೆ, ಆರ್‌ಸಿಬಿ ತಂಡದ ಆಟಗಾರರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಪಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News