×
Ad

ಬರಡು ಕೊಳವೆಬಾವಿಗಳಿಗೆ ಜೀವ ತುಂಬುವ ಉಡುಪಿಯ ಬಸ್ ಡ್ರೈವರ್ ಜೋಸೆಫ್

Update: 2017-04-29 13:19 IST

ಉಡುಪಿ, ಎ.29: ಇವರ ಹೆಸರು ಜೋಸೆಫ್ ಜಿಎಂ ರೆಬೆಲ್ಲೋ. ವೃತ್ತಿಯಲ್ಲಿ ಬಸ್ ಚಾಲಕನಾಗಿರುವ ಇವರು ಇಂದು ಬರಡು ಕೊಳವೆಬಾವಿಗಳಿಗೆ ಜೀವ ತುಂಬುವ ಅಪರೂಪದ ಕೈಂಕರ್ಯದಲ್ಲಿ ತೊಡಗಿ ಸಾಮಾಜಿಕ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಈ ಅಪರೂಪದ ಸಾಧಕನ ಬಗ್ಗೆ ಬೆಂಗಳೂರು ಮಿರರ್ ಪತ್ರಿಕೆಯ ಲೇಖನವೊಂದು ಬೆಳಕು ಚೆಲ್ಲಿದೆ.

ಕಲ್ಯಾಣಪುರ ಮೂಲದ ಜೋಸೆಫ್ ಅವರು ಹತ್ತನೇ ತರಗತಿಯ ತೇರ್ಗಡೆ ನಂತರ ಡಿಪ್ಲೋಮಾ ಶಿಕ್ಷಣ ಪಡೆದು ಮಂಗಳೂರು-ಉಡುಪಿ ಮಧ್ಯೆ ಸಂಚರಿಸುವ ಖಾಸಗಿ ಬಸ್ ಚಾಲಕರಾಗಿ ತ ಮ್ಮ ವೃತ್ತಿ ಆರಂಭಿಸಿದರು. 2010ರಲ್ಲಿ ನಡೆದ ಅವಘಡವೊಂದರಲ್ಲಿ ಮರದ ಮೇಲಿನಿಂದ ಬಿದ್ದು ಬೆನ್ನು ಹುರಿಗೆ ಗಂಭೀರ ಪೆಟ್ಟಾಗಿತ್ತು. ಒಂದು ವರ್ಷ ಹಾಸಿಗೆ ಹಿಡಿದಿದ್ದ ಅವರು ನಂತರ ಆತ್ಮಸ್ಥೈರ್ಯದಿಂದ ನಡೆದಾಡಿ ಸಾಮಾನ್ಯ ಜೀವನ ನಡೆಸುವಂತಾದರು. ಅವರ ಈ ಹಿಂದಿನ ಮಾಲಕರು ಅವರಿಗೆ ಉಡುಪಿಯ ಮಧ್ವ ವಾದಿರಾಜ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್ಮೆಂಟ್ ನ ಬಸ್ ಚಾಲಕನ ಕೆಲಸ ಕೊಡಿಸಿದರು. ಇದು ಅವರ ಜೀವನದ ಗತಿಯನ್ನೇ ಬದಲಾಯಿಸಿ ಬಿಟ್ಟಿತು. ಸಾಕಷ್ಟು ಸಮಯ ಕೂಡ ಅವರ ಬಳಿ ಇದ್ದುದರಿಂದ ಅವರು ಪಂಚಾಯತ್ ಸಭೆಗಳಲ್ಲಿ ಭಾಗವಹಿಸಲಾರಂಭಿಸಿದರು. ಅವರ ಆಸಕ್ತಿಯನ್ನು ಗಮನಿಸಿ ಆಗಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರನ್ನು ಭಾರತ್ ನಿರ್ಮಾಣ ವಾಲಂಟಿಯರ್ ಪ್ರೊಗ್ರಾಂನಲ್ಲಿ ಸೇರಿಸಿದರು. ಜೋಸೆಫ್ ಮುಂದೆ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನೂ ತಮ್ಮದಾಗಿಸಿದರು.

ಹಲವಾರು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅವರು ಪರಿಸರ ರಕ್ಷಣ ಮತ್ತು ಅಂತರ್ಜಲ ಮಟ್ಟ ಏರಿಕೆ ಕುರಿತು ಸಾಕಷ್ಟು ಜ್ಞಾನ ಸಂಪಾದಿಸಿದರು. ತಾವು ಕೆಲಸ ಮಾಡುತ್ತಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ನಂತರ ಅದನ್ನು ಮರೆತು ಬಿಡುವುದನ್ನು ಕಂಡು ಆ ಗಿಡಗಳನ್ನು ಉಳಿಸಲು ಅವುಗಳ ಬಳಿ ನೀರಿನ ಬಾಟಲಿಯಿಟ್ಟು ಹನಿ ನೀರಾವರಿ ರೀತಿಯಲ್ಲಿ ನೀರುಣಿಸಲು ಯತ್ನಿಸಿದರು. ಚರ್ಚ್ ಸೋಶಿಯಲ್ ಡೆವಲಪ್ಮೆಂಟ್ ಕಮಿಷನ್ನಿನ ಸಂಚಾಲಕರನ್ನಾಗಿ ಅವರನ್ನು ನೇಮಿಸಿದಾಗ ಬರಡು ಕೊಳವೆ ಬಾವಿಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂಬ ಆಸಕ್ತಿ ಅವರಲ್ಲಿ ಮೂಡಿತು. ತಜ್ಞರನ್ನು ಸಂಪರ್ಕಿಸಿ ಮಾಹಿತಿ ಪಡೆದ ಅವರು ಮಳೆ ನೀರು ಕೊಯ್ಲಿನ ಬಗ್ಗೆ ಸಾಕಷ್ಟು ಓದಿ ತಮ್ಮದೇ ಮಾದರಿಯಲ್ಲಿ ಬರಡು ಕೊಳವೆಬಾವಿಗಳಿಗೆ ಜೀವ ತುಂಬಲು ಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಜೋಸೆಫ್ ಅವರ ಮಾದರಿ ಸರಳ. ಬರಡು ಕೊಳವೆ ಬಾವಿಯ ಸುತ್ತ 10 ಅಡಿ ಅಗಲ ಹಾಗೂ 10 ಅಡಿ ಆಳದ ಗುಂಡಿ ತೋಡಿ ಅದರಿಂದ ಅಪಾಯವುಂಟಾಗದಂತೆ ಅದನ್ನು ಮುಚ್ಚಿ ಒಂದು ಸಣ್ಣ ರಂಧ್ರ ಹಾಗೂ ಅದಕ್ಕೆ ಫಿಲ್ಟರ್ ರೂಪದಲ್ಲಿ ಮೆಶ್ ಅಳವಡಿಸಲಾಗುವುದು. ಮಳೆ ನೀರು ಈ ರಂಧ್ರದ ಮೂಲಕ ಒಳ ಪ್ರವೇಶಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಕೊಳವೆ ಬಾವಿಗೆ ಮರು ಜೀವ ನೀಡುತ್ತದೆ ಎನ್ನುತ್ತಾರೆ ಜೋಸೆಫ್.
ಮಳೆನೀರು ಕೊಯ್ಲಿನ ಹಲವು ಮಾದರಿಗಳನ್ನೂ ಸಿದ್ಧಪಡಿಸಿರುವ ಜೋಸೆಫ್ ಶಾಲಾ ಮಕ್ಕಳಲ್ಲಿ ಅರಿವನ್ನುಂಟು ಮಾಡುವ ಕಾರ್ಯಕ್ರಮಗಳನ್ನೂ ನಡೆಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News