ಐಪಿಎಲ್ ನಲ್ಲಿ ಮಿಂಚುತ್ತಿರುವ ಉತ್ತಪ್ಪ ಕೇರಳ ರಣಜಿ ತಂಡಕ್ಕೆ ಸೇರಲಿರುವರೇ?

Update: 2017-04-29 08:49 GMT

ತಿರುವನಂತಪುರಂ,ಎ. 29: ಐಪಿಎಲ್‌ನಲ್ಲಿ ಈಗ ಮಿಂಚುತ್ತಿರುವ ರಾಬಿನ್ ಉತ್ತಪ್ಪ, ಕೇರಳದ ರಣಜಿ ತಂಡ ಸೇರಲಿದ್ದಾರೆನ್ನುವ ಸುದ್ದಿ ಹರಿದಾಡುತ್ತಿದೆ. ಕರ್ನಾಟಕದ ಸ್ಟಾರ್ ಆಟಗಾರನಾದ ಉತ್ತಪ್ಪರೊಂದಿಗೆ ಕೇರಳ ಕ್ರಿಕೆಟ್ ಅಸೋಸಿಯೇಶನ್ ಮಾತುಕತೆ ನಡೆಸಿದೆ. ಅವರಿಂದ ಸರಿಯಾದ ಸಮ್ಮತಿ ಇನ್ನಷ್ಟೇ ದೊರಕಬೇಕಾಗಿದೆ ಎಂದು ಕೇರಳ ಮೂಲದ ವೆಬ್ ಪೋರ್ಟಲೊಂದು ವರದಿ ಮಾಡಿದೆ.

ಕೇರಳದ ಮನವಿಯನ್ನು ಒಪ್ಪಿಕೊಂಡರೆ ರಾಬಿನ್ ಗೆ ಕೇರಳ ತಂಡದ ನಾಯಕತ್ವ ಲಭಿಸಲಿದೆ. ಕೇರಳದ ಕೋಚ್ ಆಗಿ ಕೆಲಸ ಮಾಡಲುಈಗಾಗಲೇ ಡೇವ್‌ ವಾಟ್ಮೋರ್ ಒಪ್ಪಿಕೊಂಡಿದ್ದಾರೆ. ರಾಬಿನ್ ಉತ್ತಪ್ಪ ಮುಂದಿನ ಋತುವಿನಲ್ಲಿ ಕೇರಳ ಕ್ರಿಕೆಟ್ ತಂಡಕ್ಕಾಗಿ ಅಂಗಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಆದರೆ ರಾಬಿನ್ ಅಂತಿಮ ಅಭಿಪ್ರಾಯವನ್ನು ತಿಳಿಸಿಲ್ಲ. ಈಗ ಅವರು ಐಪಿಎಲ್‌ನಲ್ಲಿ ಕೋಲ್ಕತಾ ಪರ ಆಡುತ್ತಿದ್ದಾರೆ.

ಕೇರಳಕ್ಕೆ ಬೇರೆ ರಾಜ್ಯದ ಮೂವರು ಆಟಗಾರರನ್ನು ಒಂದೇ ವರ್ಷ ಆಟವಾಡಿಸಲು ಸಾಧ್ಯವಿದೆ. ಕಳೆದ ವರ್ಷ ಜಲಜ್ ಸಕ್ಸೇನಾ ಆಡಿದ್ದರು. ಅವರನ್ನು ಈಸಲವೂ ತಂಡದಲ್ಲಿ ಮುಂದುವರಿಸಲು ಕೇರಳ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ. ಕಳೆದ ಬಾರಿ ಕೇರಳಕ್ಕಾಗಿಆಡಿದ್ದ ಇಕ್ಬಾಲ್ ಅಬ್ದುಲ್ಲಾರನ್ನು ತಂಡದಿಂದ ಕೈಬಿಡುವ ಚಿಂತನೆ ನಡೆದಿದ್ದರೂ ಅಂತಿಮ ನಿರ್ಧಾರವಾಗಿಲ್ಲ ಎನ್ನಲಾಗಿದೆ. ರಾಬಿನ್ ಉತ್ತಪ್ಪರಂತಹ ದೊಡ್ಡ ಆಟಗಾರರು ಕೇರಳಕ್ಕೆ ಬಂದರೆ ಅವರಿಗೆ ಸ್ಟಾರ್ ಗಿರಿ ಸಿಗುತ್ತದೆ. ಕಳೆದ ಋತುವಿನಲ್ಲಿ ಭವಿನ್ ಟಕ್ಕರ್ ಕೂಡಾ ಕೇರಳಕ್ಕೆ ಆಡಿದ್ದರು. ಕೇರಳದ ಇನ್ನೊಂದು ಸಮಸ್ಯೆ ವೇಗದ ಬೌಲರ್‌ಗಳ ಕೊರತೆ ಯಾಗಿದೆ. ಇದಕ್ಕೂ ಬೇರೆ ರಾಜ್ಯದ ಆಟಗಾರರನ್ನು ತಂಡಕ್ಕೆ ಸೇರಿಸುವ ಚಿಂತನೆ ಕೇರಳ ಕ್ರಿಕೆಟ್ ಅಸೋಸಿಯೇಶನ್ ನಡೆಸುತ್ತಿದೆ.

ರಣಜಿ ಟ್ರೋಫಿ ಎಲೈಟ್ ಗ್ರೂಪ್‌ನಲ್ಲಿ ತಲುಪುವುದು ಕೇರಳದ ಉದ್ದೇಶವಾಗಿದೆ. ಈ ಸಲ ಹೊರರಾಜ್ಯದ ಮೂವರು ಆಟಗಾರರನ್ನು ಆಡಿಸಿದ್ದರೂ ರಣಜಿ, ಏಕದಿನ, ಟ್ವೆಂಟಿಟ್ವೆಂಟಿ ಫಾರ್ಮೆಟ್‌ಗಳಲ್ಲಿ ಕೇರಳ ಸಂಪೂರ್ಣ ಸೋಲನುಭವಿಸಿತ್ತು. ಜೊತೆಗೆ ತಂಡದೊಳಗೆ ಭಿನ್ನಮತ ಕೇಳಿಬಂದಿತ್ತು. ಕೋಚ್ ಬಾಲಚಂದ್ರನ್‌ರನ್ನು ಬದಲಿಸಿ ಯೋಹಾನ್ನನ್‌ರನ್ನು ಕೋಚ್ ಮಾಡಿದರೂ ತಂಡ ಏಳಿಗೆಯಾಗಲಿಲ್ಲ. ಇದಕ್ಕೆ ಲ್ಲ ಪರಿಹಾರವೆನ್ನುವಂತೆ ಕೋಚ್ ಆಗಿ ವಾಟ್ಮೋರ್ ತಂಡದ ನಾಯಕನಾಗಿ ಉತ್ತಪ್ಪ ಇರಬೇಕೆಂದು ಕೇರಳ ಕ್ರಿಕೆಟ್‌ ಸಂಸ್ಥೆ ಬಯಸಿದೆ. ಇದೇ ವೇಳೆ ವಿಕೆಟ್ ಕೀಪರ್ ಬ್ಯಾಟ್ಸ್‌ಮೆನ್ ಸಂಜುಸ್ಯಾಮ್ಸನ್ ಬೇರೆಡೆಗೆ ಪಲಾಯನ ಮಾಡುವರೋ ಎನ್ನುವ ಸಂದೇಹವೂ ಕ್ರಿಕೆಟ್ ಸಂಸ್ಥೆಗಿದೆ. ಜೊತೆಗೆ ತನ್ನ ಸ್ಟಾರ್ ಆಟಗಾರನನ್ನು ಕರ್ನಾಟಕ ಕ್ರಿಕೆಟ್‌ಸಂಸ್ಥೆ ಬಿಟ್ಟುಕೊಡುವುದೇ ಎನ್ನುವ ಸಂದೇಹವೂ ಅದಕ್ಕಿದೆ.

  ‘‘ಉತ್ತಪ್ಪರ ತಾಯಿ ಕೇರಳದವರು. ತಂದೆ ಕೂರ್ಗ್‌ನವರು. ಅವರು ಕರ್ನಾಟಕ ರಣಜಿ ತಂಡದಲ್ಲಿ ಆಡುತ್ತಿದ್ದಾರೆ. ಅವರು ಮಲಯಾಳಂ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಕೇರಳ ಕ್ರಿಕೆಟ್ ತಂಡ ಆರಂಭಿಕ ಆಟಗಾರರ ಕೊರತೆ ಎದುರಿಸುತ್ತಿದೆ. ಉತ್ತಪ್ಪ ಪ್ರಸ್ತುತ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಅವರೊಂದಿಗೆ ಮಾತುಕತೆ ನಡೆಯುತ್ತಿದ್ದು, ಮಾತುಕತೆ ಯಶಸ್ವಿಯಾದರೆ ಉತ್ತಪ್ಪ ಈ ಋತುವಿನಲ್ಲಿ ಕೇರಳ ತಂಡದ ಇನಿಂಗ್ಸ್ ಆರಂಭಿಸಲಿದ್ದಾರೆ’ ಎಂದು ಕೇರಳ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News