×
Ad

ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಲಿ: ಫಾರೂಕ್ ಉಳ್ಳಾಲ್

Update: 2017-04-29 17:41 IST

ಮಂಗಳೂರು, ಎ.29: ಕಾರ್ತಿಕ್ ರಾಜ್ ರನ್ನು ಕೊಲೆಗೈದವರ ಬಂಧನದಿಂದ ಪ್ರಕರಣವನ್ನು ರಾಜಕೀಯ ಮೈಲೇಜ್ ಗೆ ಬಳಸಲು ಹೆಣಗಾಡಿದ ಸಂಸದ ನಳಿನ್ ಕುಮಾರ್ ಮತ್ತು ಬಿಜೆಪಿಯ ನಿಲುವು ತಂದೊಡ್ಡಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ  ವೆಲೆಂಟೀನ್ ನೇತೃತ್ವದ ಪೋಲಿಸರು ಅಭಿನಂದನಾರ್ಹರು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ನ ವಕ್ತಾರ ಫಾರೂಕ್ ಉಳ್ಳಾಲ್ ಹೇಳಿದ್ದಾರೆ.

ಹಲ್ಲೆ, ಕೊಲೆಗಳಂತಹ ಘಟನೆಗಳು ನಡೆದ ತಕ್ಷಣ ಜನರು ಮುಸ್ಲಿಮರ ಮೇಲೆ ಸಂಶಯಪಡುವಂತೆ ಹೇಳಿಕೆ ನೀಡುವ, ಮತ್ತು ಆ ಕಾರಣವನ್ನಿಟ್ಟು ಬೀದಿ ರಂಪ ಮಾಡುವ ಸಂಸದರು, ಕಾರ್ತಿಕ್ ಕೊಲೆ ಪ್ರಕರಣದ ನಂತರ "ಜಿಲ್ಲೆಗೆ ಬೆಂಕಿ ಕೊಡುವ" ಬೆದರಿಕೆ ಹಾಕಿದ್ದರು. ಈ ಹಿಂದೆ ಸೈನೈಡ್ ಮೋಹನ್ ನ ಬಂಧನವಾಗುವವರೆಗೆ ಲವ್ ಜಿಹಾದ್ ನಿಂದ ಯುವತಿಯರ ನಾಪತ್ತೆ ಹಾಗೂ ಕೊಲೆಗಳು ನಡೆಯುತ್ತಿವೆ ಎಂದವರು ಆರೋಪಿಸಿದ್ದರು .

ಜಿಲ್ಲೆಯ ಜನಜೀವನವನ್ನು ಹದಗೆಡಿಸುವ, ಕೋಮುದಳ್ಳುರಿಗೆ ಕಾರಣವಾಗುವಂತೆ "ಜಿಲ್ಲೆಗೆ ಬೆಂಕಿ ಕೊಡುವೆ" ಎಂದು ಹೇಳಿಕೆ ನೀಡಿದ್ದ ನಳಿನ್ ಕುಮಾರ್ ಕಟೀಲ್ ಕಾರ್ತಿಕ್ ಕೊಲೆಯ ನಿಜಾಂಶ ಅರಿತ ನಂತರ ನೈತಿಕ ಹೊಣೆ ಹೊತ್ತು ಜನರ ಕ್ಷಮೆ ಯಾಚಿಸಬೇಕು. ನಾಡಿನ ಶಾಂತಿಗೆ ಭಂಗ ತರುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡುವ ಸಂಸದ ನಳಿನ್ ಕುಮಾರ್ ರಾಜೀನಾಮೆ ನೀಡುವ ಮೂಲಕ ಜಿಲ್ಲೆಯ ನೆಮ್ಮದಿಯನ್ನು ಕಾಪಾಡಲಿ ಎಂದವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News