ಗೋಮಾಂಸ ಸೇವನೆ ಆರೋಪ :ಹೊಸಾಡು ಗ್ರಾಪಂ ಸದಸ್ಯೆ ಸಹಿತ ಕುಟುಂಬದ ಮೇಲೆ ದೌರ್ಜನ್ಯ ಖಂಡಿಸಿ ‘ಚಲೋ’ ಕಾರ್ಯಕ್ರಮ
ಮಂಗಳೂರು, ಎ.29: ಪರಿಶಿಷ್ಟ ಪಂಗಡದ ಕೊರಗ ಸಮುದಾಯಕ್ಕೆ ಸೇರಿದ ಕುಂದಾಪುರ ತಾಲೂಕಿನ ಹೊಸಾಡು ಗ್ರಾಪಂ ಸದಸ್ಯೆ ಶಕುಂತಳಾ ಮತ್ತವರ ಕುಟುಂಬಸ್ಥರ ಮೇಲೆ ನಡೆದ ಸಂಘಪರಿವಾರದ ಕಾರ್ಯಕರ್ತರು ಮತ್ತು ಗಂಗೊಳ್ಳಿ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ‘ಹೊಸಾಡು ಗ್ರಾಮ ಚಲೋ’ ಕಾರ್ಯಕ್ರಮ ನಡೆಸಲಾಗುವುದು ಎಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ತಿಳಿಸಿದೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಖಂಡರಾದ ಅಶೋಕ್ ಕೊಂಚಾಡಿ ಮತ್ತು ರಘುವೀರ್ ಸೂಟರ್‌ಪೇಟೆ, ಎ.24ರಂದು ಶಕುಂತಳಾರ ಸಹೋದರಿಯ ಮಗಳಾದ ಪ್ರಮೋದಾರ ನಿಶ್ಚಿತಾರ್ಥವಿತ್ತು. ಅಂದು ರಾತ್ರಿ ಸುಮಾರು 12 ಗಂಟೆಗೆ ಕುಟುಂಬಸ್ಥರು ಉಟ ಮಾಡುತ್ತಿದ್ದ ವೇಳೆ ಬಜರಂಗ ದಳದ ಕಾರ್ಯಕರ್ತರಾದ ಸುನೀಲ್ ಪೂಜಾರಿ, ಚಂದ್ರಕಾಂತ ಪೂಜಾರಿ, ಗುರುರಾಜ ಆಚಾರ್ಯ ಮತ್ತಿತರ 10 ಮಂದಿ ಅಕ್ರಮವಾಗಿ ಮನೆಗೆ ನುಗ್ಗಿ ಗೋಮಾಂಸ ಸೇವಿಸುತ್ತಿದ್ದೀರಿ ಎಂದು ಆರೋಪಿಸಿ ಊಟ ಕಿತ್ತು ಬಿಸಾಡಿ ಶಕುಂತಳಾರ ಸಂಬಂಧಿಕರಾದ ಹರೀಶ್, ಮಹೇಶ್, ಶ್ರೀಕಾಂತರಿಗೆ ಹಲ್ಲೆಗೈದು ಕೊಲೆ ಬೆದರಿಕೆ ಹಾಕಿದ್ದಾರೆ. ಹಲ್ಲೆಗೊಳಗಾದ ಮೂವರು ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಈ ಮಧ್ಯೆ ಹಲ್ಲೆ ನಡೆಸಿದ ಆರೋಪಿಗಳು ಶಕುಂತಳಾ ಮತ್ತಿತರರ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಶಕುಂತಳಾ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ಬಜರಂಗ ದಳದ ಸುಳ್ಳು ದೂರನ್ನು ಸ್ವೀಕರಿಸಿ ಕೊರಗ ಸಮುದಾಯದವರನ್ನು ವಿವಸ್ತ್ರಗೊಳಿಸಿ ಠಾಣೆಯಲ್ಲಿ ಕೂಡಿ ಹಾಕಿ ಹಿಂಸಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಶಕುಂತಳಾ ಮತ್ತವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ ಬಜರಂಗ ದಳದ ಕಾರ್ಯಕರ್ತರನ್ನು ಬಂಧಿಸಿ ಕಠಿಣ ಕ್ರಮ ಜರಗಿಸಬೇಕು ಎಂದು ಸಮಿತಿಯ ಮುಖಂಡರಾದ ನಿರ್ಮಲ ಕುಮಾರ್ ಮತ್ತು ರಮೇಶ್ ಕೋಟ್ಯಾನ್ ಒತ್ತಾಯಿಸಿದರು.
ಪೊಲೀಸರು ಮತ್ತು ಸಂಘಪರಿವಾರ ಶಾಮೀಲಾಗಿ ಈ ಕೃತ್ಯ ಎಸಗಿದೆ. ಆಹಾರ ನಮ್ಮ ಹಕ್ಕು. ಅದನ್ನು ಪ್ರಶ್ನಿಸಲು ಯಾರಿಗೂ ಸಾಧ್ಯವಿಲ್ಲ. ನಾವು ಏನು ತಿನ್ನಬೇಕು ಮತ್ತು ಬೇಡ ಎಂಬುದನ್ನು ನಿರ್ಧರಿಸಲು ಇವರು ಯಾರು? ಎಂದು ಅಶೋಕ್ ಕೊಂಚಾಡಿ ಪ್ರಶ್ನಿಸಿದರು.
ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಪೇಜಾವರ ಸ್ವಾಮೀಜಿ ವೌನ ಮುರಿಯಬೇಕು ಎಂದ ರಘುವೀರ್ ಸೂಟರ್‌ಪೇಟೆ, ಶುಕ್ರವಾರ ಉಡುಪಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಎಸ್ಪಿಗೆ ಮನವಿ ಸಲ್ಲಿಸಿದರೂ ಕೂಡ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪಶ್ಚಿಮ ವಲಯ ಐಜಿಪಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಕರಾವಳಿಯಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚುತ್ತಿದೆ. ಉಭಯ ಜಿಲ್ಲೆಗಳ ಶೇ. 60ರಷ್ಟು ಪೊಲೀಸರು ಸಂಘಿಗಳಾಗಿದ್ದಾರೆ. ರಾಜ್ಯ ಸರಕಾರ ಸಂಘ ಪರಿವಾರ ಮತ್ತು ಅದರ ಜೊತೆಗೆ ಶಾಮೀಲಾಗಿರುವ ಪೊಲೀಸರ ವಿರುದ್ಧ ಕ್ರಮ ಜರಗಿಸಬೇಕು ಎಂದು ಕರ್ನಾಟಕ ಕೋಮುಸೌಹಾರ್ದ ವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದಿನಕರ ಶೆಟ್ಟಿ, ದಯಾನಾಥ ಕೋಟ್ಯಾನ್, ಶೇಖರ ಚಿಲಿಂಬಿ, ಈಶ್ವರ್ ಟಿ. ಸೂಟರ್‌ಪೇಟೆ, ಚಂದ್ರಕುಮಾರ್, ಕಕೋಸೌ ವೇದಿಕೆಯ ಉಮರ್ ಯು.ಎಚ್. ಉಪಸ್ಥಿತರಿದ್ದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಬಗ್ಗೆ ಕಾರ್ಕಳದ ಶ್ರೀಕಾಂತ್ ಎಂಬಾತ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದು, ಈತನನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಸಮಿತಿಯ ಮುಖಂಡರು ಒತ್ತಾಯಿಸಿದರು.