×
Ad

ಕರೋಪಾಡಿ ಜಲೀಲ್ ಹತ್ಯೆ ಪ್ರಕರಣ : 11 ಮಂದಿ ಆರೋಪಿಗಳ ಬಂಧನ; ಐಜಿಪಿ

Update: 2017-04-29 18:40 IST

ಮಂಗಳೂರು, ಎ. 29: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಎಂಬಾತನ ಪಿತೂರಿ ಇದ್ದು, ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಆತ ಎಲ್ಲಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕಿದೆ. ವಿಕ್ಕಿ ಶೆಟ್ಟಿ ವಿರುದ್ಧ ಕೋಕಾ ಕಾಯ್ದೆ ಜಾರಿಗೊಳಿಸಲುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ರಾಜೇಶ್ ನಾಯಕ್, ನರಸಿಂಹ ಶೆಟ್ಟಿ, ಪ್ರಜ್ವಲ್, ಪುಷ್ಪರಾಜ್, ಸಚಿನ್, ರೋಷನ್, ಸತೀಶ್ ರೈ, ಕೇಶವ, ಪ್ರಶಾಂತ್, ವಚನ್ ಮತ್ತಿತರ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಎರಡು ಮೋಟಾರ್ ಸೈಕಲ್, ಎರಡು ತಲವಾರು ಹಾಗೂ ಒಂದು ಓಮ್ನಿ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಐಜಿಪಿ ಮಾಹಿತಿ ನೀಡಿದರು.

 ಪ್ರಕರಣದ ರೂವಾರಿ ಕರೋಪಾಡಿ ಮಿತ್ತನಡ್ಕದ ಬೇತ ಮನೆ ನಿವಾಸಿ ಪ್ರಸ್ತುತ ಕನ್ಯಾನದಲ್ಲಿ ಶಾಮಿಯಾನದ ಅಂಗಡಿಯನ್ನು ನಡೆಸುತ್ತಿರುವ ರಾಜೇಶ್ ನಾಯಕ್ ಹಾಗೂ ನರಸಿಂಹ ಯಾನೆ ನರಸಿಂಹ ಶೆಟ್ಟಿ ಇಂದು ಉಡುಪಿಯಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರನ್ನು ವಿಚಾರಿಸಿದಾಗ ಈ ಆರೋಪಿಗಳು ಭೂಗತ ಪಾತಕಿ ವಿಕ್ಕಿ ಶೆಟ್ಟಿ ಯಾನೆ ವಿಕ್ರಮ್ ಶೆಟ್ಟಿ ಯಾನೆ ಬಾಲಕೃಷ್ಣ ಶೆಟ್ಟಿಯ ಪಿತೂರಿಯಂತೆ ಈ ಕೃತ್ಯ ನಡೆಸಿದ್ದಾರೆ. ರಾಜೇಶ್ ನಾಯಕ್ ರೂಪಿಸಿದ ಸಂಚಿಗೆ ಸತೀಶ್, ಕೇಶವ ಮತ್ತು ಪ್ರಶಾಂತ್ ಸಹಾಯ ನೀಡಿದ್ದಾರೆ ಅವರು ಹೇಳಿದರು.

  ಪ್ರಧಾನ ಆರೋಪಿ ರಾಜೇಶ್ ನಾಯಕ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಈತ ವಿಟ್ಲ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ. ಆರೋಪಿಗಳಾದ ನರಸಿಂಹ ಶೆಟ್ಟಿ ಮೇಲೆ ಎರಡು ಹಾಗೂ ಸತೀಶ್ ರೈ ಮೇಲೆ ನಾಲ್ಕು ಪ್ರಕರಣಗಳು ವಿಟ್ಲ ಠಾಣೆಯಲ್ಲಿ ದಾಖಲಾಗಿವೆ ಎಂದು ಐಜಿಪಿ ಹರಿಶೇಖರನ್ ವಿವರಿಸಿದರು.

  2015ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸ್ಥಾನಕ್ಕೆ ದಿನೇಶ್ ಶೆಟ್ಟಿ ಎಂಬವರು ಆಕಾಂಕ್ಷಿಯಾಗಿದ್ದರು. ದಿನೇಶ್ ಶೆಟ್ಟಿ ಅವರು ವಿಕ್ಕಿ ಶೆಟ್ಟಿಯ ಚಿಕ್ಕಪ್ಪನ ಮಗನಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ವಿಕ್ಕಿ ಶೆಟ್ಟಿಯು ದಿನೇಶ್ ಶೆಟ್ಟಿಯನ್ನು ಬೆಂಬಲಿಸಿದ್ದ.

ಆದರೆ ದಿನೇಶ್ ಶೆಟ್ಟಿಗೆ ಅವಕಾಶ ಸಿಗದೆ ಜಲೀಲ್ ಕರೋಪಾಡಿಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿತ್ತು. ಇದರಿಂದ ವಿಕ್ಕಿ ಶೆಟ್ಟಿ ಬೇಸರಗೊಂಡಿದ್ದ. ಕರೋಪಾಡಿ ಗ್ರಾ.ಪಂ.ನ ಯಾವುದೇ ಮುಖ್ಯ ವಿಚಾರಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗಲೂ ದಿನೇಶ್ ಮತ್ತು ಜಲೀಲ್ ಮಧ್ಯೆ ಗಲಾಟೆ ಸಂಭವಿಸುತ್ತಿತ್ತು. ಪಂಚಾಯತ್ ಯಾವುದೇ ತೀರ್ಮಾನವಿದ್ದರೂ ತನ್ನ ಮಾತಿಗೆ ಜಲೀಲ್ ಬೆಲೆ ನೀಡುತ್ತಿಲ್ಲ ಎಂದು ವಿಕ್ಕಿ ಶೆಟ್ಟಿಯು ದಿನೇಶ್ ಶೆಟ್ಟಿಗೆ ದೂರವಾಣಿ ಮೂಲಕ ದ್ವೇಷ ವ್ಯಕ್ತಪಡಿಸುತ್ತಿದ್ದ. ಇದೇ ವಿಚಾರದಲ್ಲಿ ವಿಕ್ಕಿ ಶೆಟ್ಟಿ ಪಿತೂರಿ ನಡೆಸಿದ್ದಾನೆ ಎಂದು ಅವರು ತಿಳಿಸಿದರು.

ರಾಜೇಶ್ ನಾಯಕ್‌ನ ಮೇಲೆ ದಾಖಲಾಗಿರುವ ಪ್ರಕರಣಗಳಿಗೆ ಜಲೀಲ್ ಕಾರಣ ಎಂದು ರಾಜೇಶ್ ಜಲೀಲ್ ವಿರುದ್ಧ ದ್ವೇಷ ಕಾರುತ್ತಿದ್ದ. ಇತ್ತ ರಾಜೇಶ್ ನಾಯಕ್ ಜಲೀಲ್ ವಿರುದ್ಧ ದ್ವೇಷ ಕಾರುತ್ತಿರುವುದನ್ನು ಅರಿತ ವಿಕ್ಕಿ ಶೆಟ್ಟಿ ಆತನ ಮೂಲಕವೇ ಜಲೀಲ್‌ರ ಹತ್ಯೆ ನಡೆಸಿದ್ದಾನೆ ಎಂದು ಐಜಿಪಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆ, ಹೆಚ್ಚುವರಿ ಎಸ್ಪಿ ಡಾ.ವೇದಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News