×
Ad

ಸಮಸ್ಯೆ ಪರಿಹಾರಕ್ಕೆ ಗಾಂಧಿಯತ್ತ ವಿಶ್ವದ ಚಿತ್ತ: ಜೇಕಬ್ ವಡಂಕ್ಕಚೇರಿ

Update: 2017-04-29 19:21 IST

ಮಂಗಳೂರು, ಎ.29: ಕೇರಳದ ನೇಚರ್ ಲೈಫ್ ಆಸ್ಪತ್ರೆಯ ಸಂಸ್ಥಾಪಕ ಡಾ. ಜೇಕಬ್ ವಡಂಕಚೇರಿ ಮತ್ತು ಬಳಗವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ‘ಬಾ ಬಾಪು 150 ದೇಸಿ ಯಾತ್ರೆ’ಯನ್ನು ಮಂಗಳೂರಿನಲ್ಲಿಂದು ಸ್ವಾಗತಿಸಲಾಯಿತು.

ನಗರದ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ ಹಾಗೂ ಸ್ವರೂಪ ಅಧ್ಯಯನ ಕೇಂದ್ರದ ವತಿಯಿಂದ ಟಾಗೋರ್ ಪಾರ್ಕ್‌ನ ಗಾಂಧಿ ಪ್ರತಿಷ್ಠಾನದ ಆವರಣದಲ್ಲಿ ಯಾತ್ರೆಯನ್ನು ಸ್ವಾಗತಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಇಂದ ನಡೆಯಿತು.

ಈ ಸಂದರ್ಭ ಮಾತನಾಡಿದ ಜೇಕಬ್ ವಡಂಕ್ಕಚೇರಿ ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಇಡೀ ವಿಶ್ವವೇ ಮಹಾತ್ಮಾ ಗಾಂಧಿಯ ಶಾಂತಿ ಮಂತ್ರವನ್ನು ಎದುರು ನೋಡುತ್ತಿದೆ. ವಿಶ್ವದಲ್ಲಿ ಇಂದು ನಡೆಯುತ್ತಿರುವ ಹಲವು ರೀತಿಯ ಬಿಕ್ಕಟ್ಟುಗಳಿಗೆ ಗಾಂಧೀಜಿಯವರ ಅಹಿಂಸಾ ಮಾರ್ಗವೊಂದೇ ಪರಿಹಾರವೆಂಬುದು ವಾಸ್ತವ ಎಂದವರು ಹೇಳಿದರು.

ಜೀವನ ಕ್ರಮವನ್ನು ಸರಳವಾಗಿಸುವುದೇ ಜಾಗತಿಕ ತಾಪಮಾನಕ್ಕೊಂದು ಸೂಕ್ತ ಪರಿಹಾರ ಕ್ರಮ ಎಂದು ಅಭಿಪ್ರಾಯಿಸಿದ ಅವರು, ಮಾನವನ ದುರಾಸೆಯಿಂದ ನೈಸರ್ಗಿಕ ಸಂಪತ್ತಿನ ಲೂಟಿ ಆಗುತ್ತಿದೆ ಎಂದು ಬೇಸರಿಸಿದರು.

ಮಹಾತ್ಮಾ ಗಾಂಧಿಯವರು ಸಾರಿದ ಸತ್ಯ, ಅಹಿಂಸೆ, ಸತ್ಯಾಗ್ರಹ, ಸಮಾನತೆ, ಪರಿರ, ಆಧ್ಯಾತ್ಮ, ಸದ್ಭಾವನೆ, ಸರ್ವ ಧರ್ಮ ಸಹಬಾಳ್ವೆಯ ಸಂದೇಶವನ್ನು ಈ ಯಾತ್ರೆಯ ಮೂಲಕ ಹರಡಲು ಪ್ರಯತ್ನಿಸಲಾಗುತ್ತಿದೆ.

‘ಬಾ ಬಾಪು 150 ದೇಸಿ ಯಾತ್ರೆ’ಯು ವಿವಿಧ ಹಂತಗಳಲ್ಲಿ ನಡೆಯುತ್ತಿದ್ದು, ಎಪ್ರಿಲ್ 19ರಂದು ಕನ್ಯಾಕುಮಾರಿಯಿಂದ ಪ್ರಥಮ ಹಂತದ ಯಾತ್ರೆ ಆರಂಭಗೊಂಡಿದ್ದು, ಎ. 30ರಂದು ಗೋವಾ ತಲುಪಲಿದೆ.ದ್ವಿತೀಯ ಹಂತದ ಯಾತ್ರೆ ಗೋವಾದಿಂದ ಸಾಬರ್‌ಮತಿಗೆ ಎರಡು ತಿಂಗಳ ಬಳಿಕ ಆರಂಗೊಳ್ಳಲಿದೆ ಎಂದವರು ಹೇಳಿದರು.

ಗಾಂಧಿ ಶಾಂತಿ ಪ್ರತಿಷ್ಠಾನದ ರಾಷ್ಟ್ರೀಯ ಸಂಯೋಜಕ ರಮೇಶ್ ಶರ್ಮಾ ಮಾತನಾಡಿ, ಟಿವಿ ಆಕರ್ಷಣೆಯು ನೆರೆಹೊರೆಯವರ ಜತೆಗಿನ ಸಂಬಂಧವನ್ನೂ ಕಸಿದುಕೊಂಡಿದೆ. ಮಕ್ಕಳಲ್ಲಿ ಪ್ರೀತಿ, ಅಹಿಂಸೆ ಕುರಿತಾದ ಸಂದೇಶವನ್ನು ಸಾರುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

ಯಾತ್ರೆಯ ಅಂಗವಾಗಿ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಮಹಾತ್ಮಾಗಾಂಧಿ ನೇತೃತ್ವದಲ್ಲಿ ನಡೆದ ದಂಡಿ ಯಾತ್ರೆಯ ಅಣಕು ಪ್ರದರ್ಶನವನ್ನು ನೀಡಿದರು.

ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಇಸ್ಮಾಯಿಲ್, ಬಾಪು ಅಭಿಯಾನದ ಪಿ. ಕುಮಾರನ್, ಲಕ್ಷ್ಮಣ್ ಗಾಯಕ್‌ವಾಡ್, ಕುಂಞಿರಾಮನ್ ಮೊದಲಾದವರು ಉಪಸ್ಥಿತರಿದ್ದರು.

ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News