×
Ad

ಮೇ 24ರಿಂದ ನಾಗ್ಪುರದಲ್ಲಿ ದೇಶದ ಮೊದಲ ವಿದ್ಯುತ್‌ಚಾಲಿತ ಟ್ಯಾಕ್ಸಿಗಳ ಪ್ರಾಯೋಗಿಕ ಸಂಚಾರ

Update: 2017-04-29 19:47 IST

ಬಾಗಪತ್,(ಉ.ಪ್ರ),ಎ.29: ದೇಶದಲ್ಲಿ ಮೊದಲ ವಿದ್ಯುತ್ ಚಾಲಿತ ಟ್ಯಾಕ್ಸಿಗಳ ಪ್ರಾಯೋಗಿಕ ಸಂಚಾರ ನಾಗ್ಪುರದಲ್ಲಿ ಮೇ 24ರಂದು ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ಇಲ್ಲಿ ತಿಳಿಸಿದರು.

ದಿಲ್ಲಿಯ ವಾಹನ ದಟ್ಟಣೆಯನ್ನು ತಗ್ಗಿಸಲು 5,763 ಕೋ.ರೂ.ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿಯ ಪರಿಶೀಲನೆಗೆಂದು ಇಲ್ಲಿಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಪ್ರಾಯೋಗಿಕ ಸಂಚಾರಕ್ಕಾಗಿ ಮಹೀಂದ್ರ ಆ್ಯಂಡ್ ಮಹೀಂದ್ರ 200 ವಿದ್ಯುತ್ ಚಾಲಿತ ಟ್ಯಾಕ್ಸಿಗಳನ್ನು ಒದಗಿಸಲಿದೆ. ನಾಗ್ಪುರ ಮಹಾನಗರ ಪಾಲಿಕೆಯು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇದು ದೇಶದಲ್ಲಿ ಈ ಮಾದರಿಯ ಮೊದಲ ಯೋಜನೆಯಾಗಲಿದೆ ಎಂದರು

ಈ ಮೊದಲೇ ಯೋಜನೆಗೆ ಚಾಲನೆ ನೀಡಲು ನಾವು ಬಯಸಿದ್ದೆವಾದರೂ ವಿದ್ಯುತ್ ಮರುಪೂರಣ ಕೇಂದ್ರಗಳ ಸ್ಥಾಪನೆಯಲ್ಲಿ ಕೆಲವು ಸಮಸ್ಯೆಗಳು ಎದುರಾಗಿದ್ದವು ಎಂದು ಅವರು ತಿಳಿಸಿದರು.

ವಿದ್ಯುತ್ ಚಾಲಿತ ಟ್ಯಾಕ್ಸಿ ಎನ್‌ಡಿಎ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಗಳಲ್ಲೊಂದಾಗಿದ್ದು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಭಾಗವೂ ಆಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಉತ್ತಮ ವಿಧಾನವೂ ಆಗಿದೆ.

ವಾಹನಗಳಿಂದ ವಾಯುಮಾಲಿನ್ಯವನ್ನು ತಗ್ಗಿಸುವ ತಂತ್ರಜ್ಞಾನಗಳ ಕುರಿತಂತೆ ಸಾರಿಗೆ ಸಚಿವಾಲಯವು ಕಳೆದೊಂದು ವರ್ಷದಿಂದಲೂ ಶ್ರಮಿಸುತ್ತಿದೆ. ಅದು ಸಂಸದರಿಗಾಗಿ ವಿದ್ಯುತ್ ಚಾಲಿತ ಬಸ್‌ವೊಂದನ್ನು ಸಹ ಓಡಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News