×
Ad

ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದವರೇ ಬಸವಣ್ಣ: ಸಚಿವ ಪ್ರಮೋದ್

Update: 2017-04-29 20:18 IST

ಉಡುಪಿ, ಎ.29: ಸುಮಾರು 800 ವರ್ಷಗಳ ಹಿಂದೆ ತಮ್ಮ ಅನುಭವ ಮಂಟಪದ ಮೂಲಕ ಇಡೀ ವಿಶ್ವದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದವರೇ ಬಸವಣ್ಣ ಎಂದು ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

 ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ನಡೆದ ಬಸವ ಜಯಂತಿ ಆಚರಣೆಯಲ್ಲಿ ಬಸವಣ್ಣರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡುತಿದ್ದರು.

ಬಸವಣ್ಣ 12ನೇ ಶತಮಾನದಲ್ಲಿ ಪ್ರಾರಂಭಿಸಿದ ಅನುಭವ ಮಂಟಪದಲ್ಲಿ ಎಲ್ಲಾ ಜನಾಂಗದ ಜನರು ಯಾವುದೇ ಜಾತಿ, ಅಂತಸ್ತಿನ ಭೇದವಿಲ್ಲದೇ ಒಟ್ಟಿಗೆ ಕುಳಿತು ಚರ್ಚೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಪ್ರಾಯಶ: ಸಮಾನತೆಯ ಪಾಠ ಇಲ್ಲಿಂದಲೇ ಪ್ರಾರಂಭವಾಯಿತು. ಇದೇ ಇಂದಿನ ಪ್ರಜಾಪ್ರುತ್ವ ವ್ಯವಸ್ಥೆಗೆ ಮೂಲ ಬುನಾದಿ ಎಂದವರು ನುಡಿದರು.

12ನೇ ಶತಮಾನದಲ್ಲಿ ಜಾತೀಯ ವ್ಯವಸ್ಥೆ ಹಾಗೂ ಜಾತೀಯ ಆಧಾರದ ಶೋಷಣೆ ಮಿತಿ ಮೀರಿದ ಕಾಲದಲ್ಲಿ ಅದನ್ನು ತೊಡೆದು ಹಾಕಲು ಶೋಷಿತರ ನೇತೃತ್ವ ವಹಿಸಿದ ಬಸವಣ್ಣ, ಮೊತ್ತಮೊದಲ ಬಾರಿಗೆ ಶೋಷಣೆಯ ವಿರುದ್ದ ಬಂಡಾಯ ಸಾರಿದವರು. ಈ ಮೂಲಕ 800 ವರ್ಷಗಳ ಹಿಂದಯೇ ಅವರು ಸಮಾಜದಲ್ಲಿ ಸಮಾನತೆಯ ಪ್ರತಿಪಾದಿಸಿದ್ದರು ಎಂದು ಪ್ರಮೋದ್ ಹೇಳಿದರು.

ಬಸವಣ್ಣ ಸಾರಿದ ತತ್ವದ ಆಧಾರದಲ್ಲಿ ಪ್ರಸಕ್ತ ರಾಜ್ಯ ಸರಕಾರ ಕಾರ್ಯ ನಿರ್ವಹಿಸುತ್ತಿದ್ದು, ಮುಖ್ಯಮಂತ್ರಿಗಳು ಪ್ರತಿ ಜಾತಿಯ ಸಭೆಗಳಲ್ಲೂ ಸಹ ಬಸವಣ್ಣರ ತತ್ವದ ಬಗ್ಗೆ ತಪ್ಪದೇ ಮಾತನಾಡುತ್ತಾರೆ. ಹೀಗಾಗಿಯೇ ರಾಜ್ಯ ಸರಕಾರ ಪ್ರತಿ ಸರಕಾರಿ ಕಚೇರಿಯಲ್ಲಿ ಬಸವಣ್ಣ ಅವರ ಭಾವಚಿತ್ರವನ್ನು ಕಡ್ಡಾಯಗೊಳಿಸಿದೆ ಎಂದರು.

  ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಬಸವಣ್ಣ ಒಬ್ಬ ಯುಗ ಪುರುಷ. 12ನೇ ಶತಮಾನದಲ್ಲಿ ಅವರು ಪ್ರಾರಂಭಿಸಿದ ಕ್ರಾಂತಿಗೆ ಈಗಲೂ ಪ್ರಾತಿನಿಧ್ಯವಿದೆ. ಅತ್ಯಂತ ಸರಳವಾಗಿ ವಚನಗಳ ಮೂಲಕ ಅವರು ನೀಡಿದ ಸಂದೇಶಗಳು ಇಂದಿಗೂ ಪ್ರಸ್ತುತ ಎಂದರು.

ಬಸವಣ್ಣ ಕುರಿತು ವಿಶೇಷ ಉಪನ್ಯಾಸ ನೀಡಿದ ಧಾರವಾಡ ಕರಿಬಸಪ್ಪ ಕೋರಿಶೆಟ್ಟರ್ ಮಾತನಾಡಿ, ಭಾರತ ಸಂವಿಧಾನ ಮೂಲ ಉದ್ದೇಶಗಳು 800 ವರ್ಷಗಳ ಹಿಂದೆ ಅನುಭವ ಮಂಟಪದಲ್ಲಿ ಬಸವಣ್ಣ ತಿಳಿಸಿದ ಸಮಾನತೆಯ ವಿಚಾರಗಳ ಆಧಾರದಲ್ಲೇ ರಚನೆಯಾಗಿವೆ. ಶೋಷಿತರು ಮತ್ತು ಮಹಿಳೆಯರ ಸ್ವಾತಂತ್ರ ಪರವಾಗಿ ಹೋರಾಟ ಮಾಡಿದ ಪ್ರಥಮ ವ್ಯಕ್ತಿ ಬಸವಣ್ಣ ಎಂದು ವಿವರಿಸಿದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಮಹಾ ಜಗದ್ಗುರು ಬಸವಣ್ಣ ಧರ್ಮಾರ್ಥ ದತ್ತಿ ಉಡುಪಿ ಕಾರ್ಯದರ್ಶಿ ಅನ್ನಪೂರ್ಣ ಸಿದ್ದೇಶ್ವರ, ತಹಶೀಲ್ದಾರ್ ಮಹೇಶ್ಚಂದ್ರ, ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಸ್ವಾಗತಿಸಿದರು.ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಯು.ಸಿ. ನಿರಂಜನ್ ವಂದಿಸಿದರು.

ಇದಕ್ಕೆ ಮೊದಲು ಉಡುಪಿ ಸಿಟಿ ಬಸ್‌ನಿಲ್ದಾಣದಿಂದ ಬಸವಣ್ಣ ಪ್ರತಿಮೆ ಮೆರವಣಿಗೆ ಹಾಗೂ ಕಲಾವತಿ ದಯಾನಂದ ಮತ್ತು ಬಳಗದಿಂದ ವಚ ಗಾಯನ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News