ಅಕ್ಷಯ ತೃತೀಯಕ್ಕೆ ಚಿನ್ನದ ಬದಲು ದವಸ ಧಾನ್ಯಗಳಿಗೆ ಪೂಜೆ!
ಉಡುಪಿ, ಎ.29: ಕಳೆದ ಐದಾರು ವರ್ಷಗಳಿಂದ ಅಕ್ಷಯ ತೃತೀಯ ಆಚರಣೆ ಎಂದರೆ ಚಿನ್ನ ಹಾಗೂ ವಾಹನಗಳ ಖರೀದಿ ಎಂದು ನಾಡಿನಾದ್ಯಂತ ಜನ ಭಾವಿಸಿ ಚಿನ್ನದ ಅಂಗಡಿಗಳಿಗೆ ಎಡತಾಕುವ ಸನ್ನಿವೇಶ ವ್ಯಾಪಕವಾಗಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ಉಡುಪಿ ನಾಗರಿಕ ಸಮಿತಿ ದವಸ ಧಾನ್ಯಗಳ ಪೂಜೆ, ವರುಣ ಪೂಜೆಯತ್ತ ಜನರ ಗಮನವನ್ನು ಸೆಳೆದಿದೆ.
ಉಡುಪಿ ಬೈಲಕೆರೆಯ ಸಾಯಿರಾಧಾ ಯಶೋದಮ್ಮ ವಸತಿ ಸಂಕೀರ್ಣದ ನಿವಾಸಿಗಳು ಪರಿಸರದವರೊಂದಿಗೆ ಸೇರಿ ನಾಗರಿಕ ಸಮಿತಿ ಟ್ರಸ್ಟ್ ನೇತೃತ್ವದಲ್ಲಿ ದವಸ ಧಾನ್ಯ, ಲಕ್ಷ್ಮೀ ಪೂಜೆ, ವರುಣ ಪೂಜೆ, ಗೋಪೂಜೆ ಮಾಡುವ ಮೂಲಕ ಅ್ಷಯ ತೃತೀಯವನ್ನು ಆಚರಿಸಿದರು.
ಅಕ್ಷಯ ತೃತೀಯ ದಿನದಂದು ಚಿನ್ನ ಅಥವಾ ವಾಹನ ಖರೀದಿ ಮಾಡಿದರೆ ಅಭಿವೃದ್ಧಿ ಆಗುತ್ತದೆ ಎಂಬ ನಂಬಿಕೆಯನ್ನು ಜನರಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂಡಿಸಲಾಗಿತ್ತು. ಆದರೆ ಇಲ್ಲಿ ಚಿನ್ನದ ಬದಲು ಜನರ ಅಗತ್ಯಕ್ಕೆ ಬೇಕಾದ ದವಸ ಧಾನ್ಯಗಳಿಗೆ ಪೂಜೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾದರು.
ಮಹಿಳೆಯರು ಸೇರಿದಂತೆ ವಸತಿ ಸಮುಚ್ಛಯದ ನಿವಾಸಿಗಳು ಇದರಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಸುಮಾರು 7 ಅಡಿ ಅಗಲದ ರಂಗೋಲಿ ಬರೆದು, ಲಕ್ಷ್ಮೀ ದೇವರ ೆಟೊ ಇಟ್ಟು ಪೂಜೆ ಸಲ್ಲಿಸಲಾಯಿತು. ಹೊಸಪೇಟೆ ಗುರುರಾಜ ಆಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆದವು.
ಗೋವಿಂದ ಭಂಡಾರಿ ಅವರ ಚೆಂಡೆ ವಾದನ, ಸೀತಾರಾಮ ಮಹಿಳಾ ಭಜನಾ ಮಂಡಳಿಯ ಕೀರ್ತನೆ ಜತೆಗೆ ಪೂಜೆಗಾಗಿ ಶೋಭಾ ರಾಮದಾಸ್ ಶೇಟ್ ಬಿಡಿಸಿದ ರಂಗೋಲಿಯ ಸುತ್ತ 45 ಬಗೆಯ ದವಸ ಧಾನ್ಯ ಇಡಲಾಗಿತ್ತು. ರಂಗೋಲಿಯ ಮಧ್ಯದಲ್ಲಿ ತಾಮ್ರದ ಮಡಕೆ ಇಟ್ಟು ಸುತ್ತ ಹೆಸರು ಬೆಳೆ, ಸಾಬ್ಬಕ್ಕಿ, ಮುಸೂರಿ ಬೆಳೆಗಳನ್ನು ಹಾಕಿರಂಗೋಲಿಯ ಅಂಧ ಹೆಚ್ಚಿಸಲಾಗಿತ್ತು.
ಸಮಾಜ ಸೇವಕ ನಿತ್ಯಾನಂದ ಒಳಕಾಡು ಮುಂದಾಳತ್ವದಲ್ಲಿ ನಡೆದ ಈ ಪೂಜೆಗೆ ನೂರಾರು ಮಂದಿ ಸಾಕ್ಷಿಯಾದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲದ ಬಿಗಡಾಯಿಸಿದ್ದು, ಉಡುಪಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆದಷ್ಟು ಬೇಗ ಮಳೆ ಸುರಿದು ನೀರಿನ ಸಮಸ್ಯೆ ಬಗೆಹರಿಯಲೆಂದು ಪ್ರಾರ್ಥನೆ ಮಾಡಿದ್ದೇವೆ ಎಂದರು.
ಜನರು ದವಸ ಧಾನ್ಯಗಳನ್ನು ಖರೀದಿ ಮಾಡಬೇಕಿದ್ದ ಈ ಕಾಲಘಟ್ಟದಲ್ಲಿ ಚಿನ್ನದ ಖರೀದಿ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ಸರಿಯಲ್ಲ. ಚಿನ್ನದ ಖರೀದಿಯ ಬದಲು ದವಸ ಧಾನ್ಯಗಳನ್ನು ಖರೀದಿ ಮಾಡಿ ಬಡವರಿಗೆ ನೀಡಿ ಅವರ ಹಸಿವು ದೂರಮಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಜನ ಮುಂದಾಗಬೇಕೆನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಭಿವೃದ್ದಿ ಹೆಸರಿನಲ್ಲಿ ಕಾಡನ್ನು ಕಾಡಿದು ನಾಶ ಮಾಡಲಾಗುತ್ತಿದೆ. ಈ ದೃಷ್ಟಿಯಿಂದ ಪ್ರತಿಯೊಬ್ಬರೂ ಗಿಡ ನೆಟ್ಟು ಪರಿಸರದ ಹಸಿರು ಹೆಚ್ಚಿಸುವ ನಿಟ್ಟಿನಲ್ಲಿ 10 ಮಂದಿಗೆ ಸಸಿ ವಿತರಿಸಿದ್ದೇವೆ ಎಂದು ಒಳಕಾಡು ಮಾಹಿತಿ ನೀಡಿದರು. ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಉದ್ಯಮಿ ಜಯಂತ್, ಕಾರ್ಮಿಕ ರಕ್ಷಣಾ ವೇದಿಕೆಯ ರವಿ ಶೆಟ್ಟಿ ಉಪಸ್ಥಿತರಿದ್ದರು.