×
Ad

ಬೆಂಕಿ ಅಕಸ್ಮಿಕಕ್ಕೆ ‘ವಿಧವೆಯರ ಮನೆ’ ಆಹುತಿ

Update: 2017-04-29 21:32 IST

ಉಡುಪಿ, ಎ.29: ನಗರದ ಮಿಷನ್ ಕಾಂಪೌಂಡ್‌ನಲ್ಲಿರುವ ಯುಬಿಎಂಸಿ ಚರ್ಚ್‌ಗೆ ಹಿಂದಿರುವ ‘ವಿಧವೆಯರ ಮನೆ’ ಇಂದು ಅಪರಾಹ್ನ ಅಕಸ್ಮಿಕ ಬೆಂಕಿ ಅವಘಡಕ್ಕೆ ಸಂಪೂರ್ಣ ಸುಟ್ಟು ಹೋಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ.

ಮನೆಯ ಹೊರಗೆ ಒಬ್ಬ ವೃದ್ಧೆ ಇದ್ದರೂ ಆಕೆ ಅಪಾಯ ಅರಿತು ದೂರ ಓಡಿ ಬಚಾವಾಗಿದ್ದಾರೆ. ಬೆಂಕಿಗೆ ಇಡೀ ಮನೆಯ ಮಾಡು, ಮನೆಯೊಳಗಿದ್ದ ಹೆಚ್ಚಿನ ಪಾತ್ರೆಪಗಡಿ, ಬಟ್ಟೆಗಳು ಸಂಪೂರ್ಣ ಸುಟ್ಟು ಹೋಗಿವೆ. ಕೋಣೆ ಯೊಳಗಿದ್ದ ಗಾದ್ರೇಜ್‌ನಲ್ಲಿದ್ದ ಕೆಲವು ವಸ್ತುಗಳು ಉಳಿದುಕೊಂಡಿವೆ ಎಂದು ಬೆಂಕಿ ನಂದಿಸುವಲ್ಲಿ ಶ್ರಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಿಳಿಸಿದ್ದಾರೆ.

 ಈ ವಿಧವಾ ಗೃಹದಲ್ಲಿ ಮೂವರು ವೃದ್ಧೆಯರು ವಾಸವಾಗಿದ್ದರೆಂದು ತಿಳಿದುಬಂದಿದೆ. ಅವರಲ್ಲಿ ಇಬ್ಬರು ಘಟನೆಯ ವೇಳೆ ಹೊರಗೆ ಹೋಗಿದ್ದರೆ, ಒಬ್ಬರು ಅಡಿಗೆ ತಯಾರಿಸಲು ಬೆಂಕಿ ಉರಿಸುವಾಗ ಬೆಂಕಿಯ ಕಿಡಿ ಹಾರಿ ಒಣಗಿದ ಕಟ್ಟಿಗೆಯ ಮೇಲೆ ಬಿದ್ದು ಅದಕ್ಕೆ ಬೆಂಕಿ ಹಿಡಿದು ಘಟನೆ ನಡೆದಿರಬೇಕೆಂದು ಶಂಕಿಸಲಾಗಿದೆ. 11 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬಿಸಿಲು ಹಾಗೂ ಗಾಳಿಯಿಂದಾಗಿ ಬೆಂಕಿ ತಕ್ಷಣವೇ ಇಡೀ ಮನೆಗೆ ವ್ಯಾಪಿಸಿತು ಎಂದು ಹೇಳಲಾಗಿದೆ. ಕೂಡಲೇ ಮಾಹಿತಿ ಪಡೆದ ಉಡುಪಿ ಹಾಗೂ ಮಲ್ಪೆಯ ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಪರಿಸರದವರ ಸಹಕಾರದೊಂದಿಗೆ ಬೆಂಕಿ ನಂದಿಸಲು ಯಶಸ್ವಿಯಾದವು. ಘಟನೆಯಿಂದ ಸುಮಾರು ಐದು ಲಕ್ಷ ರೂ.ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ.

ಮನೆಯೊಳಗೆ ಅಡುಗೆಕೋಣೆಯಲ್ಲಿ ಅನಿಲದ ಸಿಲಿಂಡರ್‌ಗಳಿದ್ದರೂ, ಪುಣ್ಯವಶಾತ್ ಅವುಗಳವರೆಗೆ ಬೆಂಕಿ ಹಬ್ಬಿರಲಿಲ್ಲ. ನಾವು ಬಂದ ತಕ್ಷಣ ಮನೆಯೊಳಗಿನಿಂದ ಸಿಲಿಂಡರ್‌ಗಳನ್ನು ಜಾಗೃತೆಯಾಗಿ ಹೊರಗೆ ತಂದೆವು ಎಂದು ಅಗ್ನಿಶಾಮಕ ದಳದ ಅಧಿಕಾರಿ ಚಂದ್ರಶೇಖರ ಭಂಡಾರಿ ತಿಳಿಸಿದರು. ಸುಮಾರು ಒಂದೂವರೆ ಗಂಟೆಗಳ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದರು. ಆದರೂ ಮನೆಯೊಳಗೆ ಹೆಚ್ಚಿನ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದರು.

ಮನೆಯ ಮೂವರು ವೃದ್ಧೆಯರಿಗೆ ತಾತ್ಕಾಲಿಕ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾ ಗಿದೆ. ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಮೂವರು ಮಹಿಳೆಯರಿಗೆ ತಲಾ 5000 ರೂ.ಗಳನ್ನು ಪರಿಹಾರ ಧನವಾಗಿ ನೀಡಿದರು. ಸರಕಾರದಿಂದ ಗರಿಷ್ಠ ನೆರವು ದೊರಕುವಂತೆ ಪ್ರಯತ್ನಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News