×
Ad

ಮೂವಾಡಿ ಕೊರಗರ ಮೇಲೆ ಹಲ್ಲೆ: ವಿವಿಧ ಸಂಘಟನೆಗಳಿಂದ ಸಚಿವರ ಭೇಟಿ; ಕ್ರಮಕ್ಕೆ ಆಗ್ರಹ

Update: 2017-04-29 21:38 IST

ಉಡುಪಿ, ಎ.29: ಮೂವಾಡಿಯಲ್ಲಿ ಕೊರಗ ಯುವಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಅಪರಾಧಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟ ಮತ್ತು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ನಿಯೋಗ ವೊಂದು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರನ್ನು ಭೇಟಿ ಮಾಡಿ ಘಟನೆಯ ವಾಸ್ತವ ವಿಚಾರವನ್ನು ಮನವರಿಕೆ ಮಾಡಿ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.

   ನಿಯೋಗದ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ಎಸ್ಪಿಜೊತೆ ದೂರವಾಣಿಯಲ್ಲಿ ಮಾತಾಡಿ ಅಪರಾಧಿಗಳನ್ನು ಕೂಡಲೇ ಬಂಧಿಸುವಂತೆ ಸೂಚಿಸಿದರು. ಅನಂತರ ಕುಂದಾಪುರದ ಡಿವೈಎಸ್ಪಿ ಅವರಲ್ಲಿ ಘಟನೆಯ ವಿವರಣೆ ಕೇಳಿ ತಂಡಗಳನ್ನು ರಚಿಸಿ ದೌರ್ಜನ್ಯ ಎಸಗಿದವರನ್ನು  ಕ್ಷಣವೇ ಬಂಧಿಸುವಂತೆ ತಿಳಿಸಿದರು.

ನಿಯೋಗದಲ್ಲಿ ವಿವಿಧ ಸಂಘಟನೆಗಳ ದಲಿತ ಮುಖಂಡರಾದ ಸುಂದರ ಮಾಸ್ಟರ್, ನಾರಾಯಣ ಮಣೂರು, ಉದಯಕುಮಾರ್ ತಲ್ಲೂರು, ವಿಶ್ವನಾಥ ಪೇತ್ರಿ, ಶ್ಯಾಮರಾಜ್ ಬಿರ್ತಿ, ವಂ.ವಿಲಿಯಂ ಮಾರ್ಟಿಸ್, ಜಿ.ರಾಜಶೇಖರ, ಫಣಿರಾಜ್, ಇದ್ರಿಸ್ ಹೂಡೆ, ದಿನಕರ ಬೆಂಗ್ರೆ, ಕೆ.ಎಸ್.ವಿಜಯ, ಚಂದ್ರ ಅಲ್ತಾರು, ಗೋಪಾಲ ವಿ. ಸುಂದರ್ ಕಪ್ಪೆಟ್ಟು, ವಿಟಲ್ ತೊಟ್ಟಂ, ಪ್ರಶಾಂತ ತೊಟ್ಟಂ, ಅನಂತ ಮಚ್ಚಟ್ಟು ಭಾಸ್ಕರ ಮಾಸ್ತರ್, ಪ್ರವೀಣ್ ಗುಂಡಿಬೈಲು, ಯಾಸೀನ್ ಕೋಡಿಬೆಂಗ್ರೆ, ಅಜೀಜ್ ಉದ್ಯಾವರ ಮತ್ತಿತರು ಉಸ್ಥಿತರಿದ್ದರು.

ಇದಕ್ಕೂ ಮುನ್ನ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಸಭೆ ನಡೆಸಿದ ನಿಯೋಗದ ಸದಸ್ಯರು, ನಿನ್ನೆ ಬನ್ನಂಜೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಮಂಗಳವಾರದವರೆಗೆ ಗಡು ನೀಡಿದ್ದು ಆ ದಿನದ ಒಳಗೆ ಬಂಧಿಸದೇ ಇದ್ದಲ್ಲಿ ಎಸ್ಪಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿತು.

ಅಲ್ಲದೇ ಮೊವಾಡಿ ಘಟನೆಯ ಹಿನ್ನಲೆಯಲ್ಲಿ ಸಂವಿಧಾನ ಒದಗಿಸಿದ ಆಹಾರ ನಮ್ಮ ಆಯ್ಕೆ ಎನ್ನುವ ಬಗ್ಗೆ ಜನಜಾಗೃತಿಯ ಉದ್ದೇಶದಿಂದ ಚಲೋ ಮೊವಾಡಿ /ಚಲೋ ಕುಂದಾಪುರ ಕಾರ್ಯಕ್ರಮ ಯೋಜಿಸಲು ಸಹ ಚರ್ಚೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News