ದಾರಿ ತಪ್ಪಿದಾಗ ಬಸವಣ್ಣರ ತತ್ವಗಳು ಎಚ್ಚರಿಸುವಂತಾಗಲಿ: ಸಚಿವ ರೈ
ಮಂಗಳೂರು, ಎ. 29: ದಾರಿ ತಪ್ಪಿ ಹೋಗುವ ಸಮಯಗಳಲ್ಲಿ ಬಸವಣ್ಣನವರ ತತ್ವಗಳು ನಮ್ಮನ್ನು ಎಚ್ಚರಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಶನಿವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘಗಳ ಜಂಟಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿದ್ದ ಶ್ರೀ ಬಸವೇಶ್ವರ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.
ಧರ್ಮದ ಹೆಸರಿನಲ್ಲಿ ಕಂದಕಗಳ ಸೃಷ್ಟಿಯಾಗುತ್ತಿರುವುದು ವಿಷಾದನೀಯ. ಮನುಷ್ಯ ಒಬ್ಬರನ್ನೊಬ್ಬರನ್ನು ನಂಬದೇಅಪನಂಬಿಕೆಯಲ್ಲೇ ಬದುಕುವಂತಾಗಿದೆ. ಬಸವಣ್ಣನವರು 12ನೇ ಶತಮಾನದಲ್ಲೇ ಜನರನ್ನು ಧಾರ್ಮಿಕ ವೈಚಾರಿಕತೆಯ ಕಡೆಗೆ ಕರೆದೊಯ್ಯಲು ಬಸವಣ್ಣ ಪ್ರಯತ್ನಿಸಿದ್ದರು. ಜಾತಿರಹಿತ, ವರ್ಗರಹಿತ, ಲಿಂಗರಹಿತ ಸಮಾಜದ ಕನಸನ್ನು ಕಂಡಿದ್ದರು ಎಂದು ಸಚಿವರು ಹೇಳಿದರು.
ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಬಲ್ಲಾಳ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ , ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೆ.ಎಂ.ಶಾಂತರಾಜು, ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಮಲ್ಲಿಕಾರ್ಜುನ, ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ವಿರೂಪಾಕ್ಷ ಉಪಸ್ಥಿತರಿದ್ದರು.