×
Ad

ಮೊವಾಡಿ ಪ್ರಕರಣ: ತಕ್ಷಣ ತಪ್ಪಿತಸ್ಥರ ಬಂಧನಕ್ಕೆ ಆಗ್ರಹ

Update: 2017-04-30 17:38 IST

ಉಡುಪಿ, ಎ.30: ಮೊವಾಡಿಯ ಕೊರಗ ಕಾಲನಿಯ ಯುವಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸುವಂತೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಿಯೋಗವೊಂದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದೆ.

ಈ ಪೈಶಾಚಿಕ ಕೃತ್ಯದಿಂದ ಕೊರಗರು ಭಯದಿಂದ ಬದುಕುವ ವಾತಾವರಣ ನಿರ್ಮಾಣಗೊಂಡಿದೆ. ಈ ಪ್ರಕರಮದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಾರದೊಳಗೆ ಅಪರಾಧಿಗಳನ್ನು ಬಂಧಿಸದಿದ್ದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ತೀವ್ರ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಇದಕ್ಕೆ ಮುನ್ನ ಒಕ್ಕೂಟದ ನಿಯೋಗವೊಂದು ಕುಂದಾಪುರ ತಾಲೂಕು ಗಂಗೊಳ್ಳಿ ಠಾಣಾ ವ್ಯಾಪ್ತಿಯ ಮೊವಾಡಿಯ ಕೊರಗರ ಕಾಲನಿಯಲ್ಲಿರುವ ಸಂತ್ರಸ್ಥರ ಮನೆಗೆ ಭೇಟಿ ನೀಡಿ ಘಟನೆಯ ವಿವರಗಳನ್ನು ಪಡೆಯಿತು. ಸೋಮವಾರ ಮಧ್ಯರಾತ್ರಿ ವೇಳೆ ಕೊರಗರ ಮನೆಗಳಿಗೆ ನುಗ್ಗಿದ ಬಜರಂಗ ದಳದ ಗುಂಪೊಂದು ಯುವಕರಾದ ಹರೀಶ, ಉಮೇಶ ಹಾಗೂ ಶ್ರೀಕಾಂತರ ಮೇಲೆ ಹಲ್ಲೆ ನಡೆಸಿ, ಹೊಸಾಡು ಗ್ರಾಪಂ ಸದಸ್ಯೆ ಶಕುಂತಳಾ ಅವರಿಗೆ ಜಾತಿನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡಿತ್ತು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೌರಿ ಕೆಂಜೂರು ಆರೋಪಿಸಿದರು.

   ಪೊಲೀಸರ ಸಮ್ಮುಖದಲ್ಲಿ ನಡೆದ ಈ ಘಟನೆಯಿಂದ ಬುಡಕಟ್ಟು ಜನಾಂಗದ ಕೊರಗರಿಗೆ ಅಭದ್ರತೆಯ ಭಾವನೆ ಕಾಡುತ್ತಿದೆ. ಸತ್ಯ,ನಿಷ್ಠೆ ಹಾಗೂ ಪ್ರಾಮಾಣಿಕತೆ ಯಿಂದ ಬದುಕುತ್ತಿರುವ ಕೊರಗರಿಗೆ ‘ನಾಗರಿಕ’ರೆಂದು ಕರೆಸಿಕೊಂಡವರಿಂದ ಎದುರಾದ ಈ ರೀತಿಯ ದೌರ್ಜನ್ಯದಿಂದ ಸಂಪೂರ್ಣ ಹತಾಶರಾಗಿದ್ದಾರೆ ಎಂದವರು ಹೇಳಿದ್ದಾರೆ.

 ಮೊವಾಡಿಗೆ ಭೇಟಿ ನೀಡಿದ ನಿಯೋಗದಲ್ಲಿ ಗೌರಿ ಕೆಂಜೂರು ಅಲ್ಲದೇ, ಮಾಜಿ ಅಧ್ಯಕ್ಷೆ ಸುಶೀಲ ನಾಡ, ಉಪಾದ್ಯಕ್ಷ ಕೊಗ್ಗ ರಮೇಶ್ ಕೋಡಿಕಲ್, ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಬೊಗ್ರ ಕೊರಗ ಕೊಕ್ಕರ್ಣೆ, ಕುಂದಾಪುರ ತಾಲೂಕು ಸಮಿತಿಯ ಅದ್ಯಕ್ಷ ದೀಪ ಜಪ್ತಿ, ಸದಸ್ಯರಾದ ಶ್ರೀಧರ ನಾಡ, ಶೇಖರ್ ಮರವಂತೆ, ಮೋಹನ ಕಾಪು, ಕುಮಾರ ಕೆಂಜೂರು, ಚಂದ್ರ ಕೊಕ್ಕರ್ಣೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News