ಕೊಣಾಜೆ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮಕ್ಕೆ ಸೂಚನೆ: ಸಚಿವ ಖಾದರ್

Update: 2017-04-30 12:46 GMT

ಮಂಗಳೂರು, ಎ.30: ಕೊಣಾಜೆ ಪೊಲೀಸ್ ಠಾಣಾ ಸಮೀಪ ಐದಾರು ತಿಂಗಳ ಹಿಂದೆ ನಡೆದ ಪಜೀರ್ ಗ್ರಾಮದ ಕಾರ್ತಿಕ್ ರಾಜ್ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಸಮರ್ಪಕ ರೀತಿಯಲ್ಲಿ ತನಿಖೆ ನಡೆಸದ ಇನ್‌ಸ್ಪೆಕ್ಟರ್ ಅಶೋಕ್ ವಿರುದ್ಧ ತನಿಖೆ ನಡೆಸಿ ಕ್ರಮ ಜರಗಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ರವಿವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ತಿಕ್ ಹತ್ಯೆ ಪ್ರಕರಣದ ವಿಚಾರಣೆ ವೇಳೆ ಕೊಣಾಜೆ ಪೊಲೀಸರು 100ಕ್ಕೂ ಅಧಿಕ ಮಂದಿಯನ್ನು ತನಿಖೆಗೆ ಒಳಪಡಿಸಿದ್ದಾರೆ. ಈ ಸಂದರ್ಭ ಅನೇಕ ಮಂದಿ ಪೊಲೀಸರಿಂದ ಹೊಡೆತ ತಿಂದಿದ್ದಾರೆ. ಕೊಲೆ ನಡೆದ ತಕ್ಷಣ ಸ್ಥಳೀಯರ ಮಾಹಿತಿಯನ್ನು ಆಧರಿಸಿ ಕಾಂಗ್ರೆಸ್ ನಾಯಕರು ಕಾರ್ತಿಕ್ ರಾಜ್‌ನ ಮನೆ ಮಂದಿಯನ್ನು ವಿಚಾರಣೆ ನಡೆಸುವಂತೆ ಆಗ್ರಹಿಸಿದ್ದರು. ಆದರೆ ಕೊಣಾಜೆ ಇನ್‌ಸ್ಪೆಕ್ಟರ್ ಸರಿಯಾಗಿ ತನಿಖೆ ನಡೆಸಲಿಲ್ಲ. ಅನೇಕ ಮಂದಿಯನ್ನು ವಶಕ್ಕೆ ತೆಗೆದುಕೊಂಡು ಹಿಂಸಿಸಿದರೂ ತಾನು ಸತ್ಯಾಂಶ ಹೊರಗೆ ಬರಲಿ ಎಂದು ತಾಳ್ಮೆ ವಹಿಸಿದ್ದೆ.

ತನ್ನ ವಿರುದ್ಧ ಬಿಜೆಪಿಗರು ಆರೋಪ ಮಾಡಿದಾಗಲೂ ಮೌನವಾಗಿದ್ದೆ. ತಾನು ಪೊಲೀಸ್ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡದೆ ಅಪರಾಧಿಗಳನ್ನು ಬಂಧಿಸುವಂತೆ ಹೇಳಿದ್ದೆ. ಕೊಣಾಜೆ ಇನ್‌ಸ್ಪೆಕ್ಟರ್ ಅಶೋಕ್‌ಗೆ ಹತ್ಯೆಯಾದ ಕಾರ್ತಿಕ್ ರಾಜ್ ಸಂಬಂಧಿಕ. ಆದರೂ ಅವರು ಸರಿಯಾಗಿ ತನಿಖೆ ನಡೆಸಲಿಲ್ಲ. ಸಿಸಿಬಿ ಎಸಿಪಿ ವೆಲೆಂಟೈನ್ ಡಿಸೋಜ ನೇತೃತ್ವದ ತಂಡಕ್ಕೆ ತನಿಖೆಯ ಜವಾಬ್ದಾರಿ ವಹಿಸಿದ 15 ದಿನದಲ್ಲಿ ಬಂಧಿಸಲು ಸಾಧ್ಯವಾಯಿತು. ಹಾಗಾಗಿ ಕೊಣಾಜೆ ಇನ್‌ಸ್ಟೆಕ್ಟರ್ ಯಾಕೆ ನಿರ್ಲಕ್ಷ ವಹಿಸಿದರು ಎಂಬುದನ್ನು ತಿಳಿಯಲು ಅವರ ವಿರುದ್ಧವೇ ತನಿಖೆ ನಡೆಸಬೇಕಾಗಿದೆ ಎಂದರಲ್ಲದೆ, ಇದನ್ನು ರಾಜ್ಯ ಗೃಹ ಸಚಿವರ ಗಮನಕ್ಕೂ ತರವುದಾಗಿ ಹೇಳಿದರು.

ಯಡಿಯೂರಪ್ಪ ಕ್ಷಮೆ ಯಾಚಿಸಲಿ: ಕಾರ್ತಿಕ್‌ರಾಜ್ ಕೊಲೆ ಪ್ರಕರಣದಲ್ಲಿ ಯಾವ ಪುರಾವೆ ಇಲ್ಲದೆಯೂ ಒಂದು ಸಮುದಾಯದ ವಿರುದ್ಧ ಆರೋಪ ಮಾಡಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇದೀಗ ಕ್ಷಮೆಯಾಚಿಸಬೇಕು ಎಂದ ಖಾದರ್, ಸ್ಥಳೀಯ ಬಿಜೆಪಿಗರು ಹೇಳಿದರೆಂಬ ಕಾರಣಕ್ಕೆ ಮಾಜಿ ಸಿಎಂ ಎಂಬ ವಿವೇಚನೆಯೂ ಇಲ್ಲದೆ, ಕಟ್ಟುಕಥೆ ಹೆಣೆದು ಸಿಎಂಗೆ ಮಾಜಿ ಸಿಎಂ ಯಡಿಯೂರಪ್ಪ ಮನವಿ ಸಲ್ಲಿಸಿದ್ದರು. ಇದೀಗ ಸತ್ಯಾಂಶ ಹೊರ ಬಿದ್ದಿದೆ. ಈ ಘಟನೆಯು ಹಂತಕರಿಗೂ, ರಾಜಕೀಯ ಬೇಳೆ ಬೇಯಿಸಲು ಹೊರಟವರಿಗೂ ಸ್ಪಷ್ಟ ಸಂದೇಶ ನೀಡಿದೆ. ಕೊಲೆ ಮಾಡಿದವರೂ ಸಿಕ್ಕಿದ್ದಾರೆ. ನಾಟಕ ಮಾಡಿದವರ ಬಣ್ಣವೂ ಬದಲಾಗಿದೆ ಎಂದರು.

ಅಭಿನಂದನೆ: ಸ್ವಲ್ಪ ತಡವಾಗಿಯಾದರೂ ಮಂಗಳೂರು ಕಮಿಷನರ್ ಚಂದ್ರಶೇಖರ್ ನೇತೃತ್ವದಲ್ಲಿ ಎಸಿಪಿ ವೆಲೆಂಟೈನ್ ಡಿಸೋಜರ ಸಿಸಿಬಿ ತಂಡ ನಿಗೂಢ ಪ್ರಕರಣವನ್ನು ಭೇದಿಸಿ ಸತ್ಯವನ್ನು ಸಮಾಜದ ಮುಂದೆ ತಂದಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದ್ದ ರಾಜು ಮೊಗೇರ, ಸ್ವಾನ್ ಮತ್ತು ಕಾರ್ತಿಕ್‌ರಾಜ್ ಸೇರಿದಂತೆ ಮೂರೂ ಹತ್ಯೆಗಳ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಮಿನಲ್ ಯಾವ ಪಕ್ಷ, ಧರ್ಮದವನಾದರೂ ಬೆಂಬಲಿಸಬಾರದು. ಜನಪ್ರತಿನಿಧಿಗಳು ಸಮಾಜವನ್ನು ಕಟ್ಟಬೇಕೇ ವಿನಃ ಒಡೆಯಬಾರದು. ಇಲ್ಲಿ ಕೊಲೆಯಾದ ಕಾರ್ತಿಕ್‌ರಾಜ್‌ನ ದುಃಖತಪ್ತ ಹೆತ್ತವರನ್ನೂ ಬಲಾತ್ಕಾರವಾಗಿ ಪ್ರತಿಭಟನಾ ಸ್ಥಳಕ್ಕೆ ತಂದು ಕೂರಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡಿದವರು ಈಗ ಯಾಕೆ ವೌನ ತಾಳಿದ್ದಾರೆ ಎಂದು ಖಾದರ್ ಪ್ರಶ್ನಿಸಿದರು.

ಕರೋಪಾಡಿ ಹತ್ಯೆ: ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಭೂಗತ ಪಾತಕಿ ಹೆಸರು ಕೇಳಿಬಂದಿದ್ದು, ಸ್ಥಳೀಯರ ಮಾಹಿತಿ ಇಲ್ಲದೆ ಈ ಘಟನೆ ನಡೆಯಲು ಸಾಧ್ಯವಿಲ್ಲ. ಗೃಹ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಲಿದೆ. ವಿದೇಶದಲ್ಲಿ ಕುಳಿತು ಹತ್ಯೆ ಮಾಡಿಸುವವರ ಜಾಡು ಹಿಡಿದು ಶಿಕ್ಷಿಸುವ ಎಲ್ಲ ಪ್ರಯತ್ನ ಇಲಾಖೆ ಮಾಡಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News