×
Ad

ವಿಶಿಷ್ಟ ಚೇತನರ ಕಲ್ಯಾಣಕ್ಕೆ ವಿಶೇಷ ಅನುದಾನ: ಮೇಯರ್

Update: 2017-04-30 18:29 IST

ಮಂಗಳೂರು, ಎ.30: ವಿಶಿಷ್ಟ ಚೇತನರ ಕಲ್ಯಾಣಕ್ಕೆ ಮಂಗಳೂರು ಮಹಾನಗರ ಪಾಲಿಕೆಯು ವಿಶೇಷ ಅನುದಾನ ಮೀಸಲಿಟ್ಟಿದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.

ನಗರದ ಪುರಭವನದಲ್ಲಿ ರವಿವಾರ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮನಪಾ ವಿಶಿಷ್ಟರ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ಕೈಗೊಂಡಿದೆ. ಕೆಲವು ವಿಶಿಷ್ಟ ಚೇತನರು ನಗರದಲ್ಲಿ ಸ್ವ ಉದ್ಯೋಗ ಮಾಡಲು ಪರವಾನಿಗೆ ಸಮಸ್ಯೆ ಎದುರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರಗಿಸುವುದಾಗಿ ಕವಿತಾ ಸನಿಲ್ ನುಡಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ ರಾಜ್ಯ ಸರಕಾರವು ವಿಶಿಷ್ಟ ಚೇತನರ ಮಾಸಾಶನವನ್ನು 500 ರೂ.ನಿಂದ 1 ಸಾವಿರಕ್ಕೆ ಏರಿಸಿದೆ. ವಿಶಿಷ್ಟ ಚೇತನರು ಸ್ವ ಉದ್ಯೋಗ ಮಾಡಲು ಅವಕಾಶವಿದ್ದರೂ ಕೂಡ ಪರವಾನಿಗೆ ಸಮಸ್ಯೆಯಿಂದ ನಗರದಲ್ಲಿ ಅನೇಕ ವಿಶಿಷ್ಟ ಚೇತನರು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಮನಪಾ ಆಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ವಿಶಿಷ್ಟ ಚೇತನರ ಬಗ್ಗೆ ಅನುಕಂಪ ಬೇಡ. ಅವರಿಗೆ ಅವಕಾಶ ನೀಡಬೇಕು. ಅವರ ಪ್ರತಿಭೆಯನ್ನು ಬೆಳಕಿಗೆ ತರಲು ಪೂರಕ ವಾತಾವರಣ ಸೃಷ್ಟಿಸಬೇಕು ಎಂದರು.

ನಿಟ್ಟೆ ವಿವಿ ಕುಲಾಧಿಪತಿ ಡಾ. ಎನ್.ವಿನಯ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಉಪ ಕುಲಾಧಿಪತಿ ಡಾ.ಎಂ. ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಪ್ರಭು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಕೆಎಸ್ಸಾರ್ಟಿಸಿ ನಿಯಂತ್ರಣಾಧಿಕಾರಿ ವಿವೇಕಾನಂದ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಡಾ. ಮುರಳೀಧರ ನಾಯಕ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News