‘ಮಂಗಳೂರು ಚಲೋ’ ಅನಗತ್ಯ: ಸಚಿವ ಯು.ಟಿ.ಖಾದರ್
ಮಂಗಳೂರು, ಎ.30: ಅಹ್ಮದ್ ಖುರೇಷಿ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣದ ಸಿಐಡಿ ತನಿಖೆ ನಡೆಯುತ್ತಿದೆ. ಈ ಮಧ್ಯೆ ಮೇ 2ರ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ‘ಮಂಗಳೂರು ಚಲೋ’ ನಡೆಸುವ ಅಗತ್ಯವಿಲ್ಲ. ಮುಗ್ಧ ಮುಸ್ಲಿಮರನ್ನು ಸೇರಿಸಿ ಇತರರನ್ನು ನಿಂದಿಸಿ ಭಾಷಣ ಮಾಡಿದರೆ ಯಾರಿಗೂ ಪ್ರಯೋಜನವಾಗದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ರವಿವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರವಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹ್ಮದ್ ಖುರೇಷಿ ಮೇಲೆ ಪೊಲೀಸರು ನಡೆಸಿದ್ದಾರೆ ಎನ್ನಲಾದ ದೌರ್ಜನ್ಯದ ಬಗ್ಗೆ ಸಿಐಡಿ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ. ವಾಸ್ತವ ಅರಿತ ಕೆಲವರು ‘ಮಂಗಳೂರು ಚಲೋ’ದಿಂದ ಹಿಂದೆ ಸರಿದಿದ್ದಾರೆ ಎಂದು ಖಾದರ್ ತಿಳಿಸಿದರು.
ನ್ಯಾಯಾಲಯದಲ್ಲಿ ದೂರು ದಾಖಲಿಸಲಿ: ಅಹ್ಮದ್ ಖುರೇಷಿ ಮೇಲೆ ದೌರ್ಜನ್ಯ ನಡೆದಿದ್ದರೆ ಪೊಲೀಸರ ವಿರುದ್ಧ ಕ್ರಮಕ್ಕಾಗಿ ‘ಮಂಗಳೂರು ಚಲೋ’ ನಡೆಸುವವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುವ ಅವಕಾಶವಿತ್ತು. ಆದರೆ, ಹಾಗೇ ಮಾಡದೆ ಅಮಾಯಕರನ್ನು ದಾರಿ ತಪ್ಪಿಸುವ ಕೆಲಸವನ್ನು ಸಂಘಟಕರು ಮಾಡುತ್ತಿದ್ದಾರೆ ಎಂದು ಖಾದರ್ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಉಳ್ಳಾಲ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಈಶ್ವರ ಉಳ್ಳಾಲ್, ಹರ್ಷರಾಜ ಮುದ್ಯ, ಜಿಪಂ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಪಜೀರ್ ಗ್ರಾಪಂ ಅಧ್ಯಕ್ಷ ಸೀತಾರಾಮ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ಮೆಲ್ವಿನ್ ಡಿಸೋಜ, ತಾಪಂ ಸದಸ್ಯರಾದ ಸುರೇಖಾ ಚಂದ್ರಶೇಖರ್, ಜಬ್ಬಾರ್ ಬೋಳಿಯಾರ್, ಮಾಜಿ ತಾಪಂ ಸದಸ್ಯ ಮುಸ್ತಫಾ ಹರೇಕಳ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.