ಮೇ 8-10: ಶ್ರೀಮಧ್ವಾಚಾರ್ಯರ ಏಕಶಿಲಾವಿಗ್ರಹ ಪ್ರತಿಷ್ಠಾಪನೆ
ಉಡುಪಿ, ಎ.30: ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರ ಆಶಯದಂತೆ ನಿರ್ಮಿಸಿರುವ ಶ್ರೀಮಧ್ವಾಚಾರ್ಯರ 32 ಅಡಿ ಎತ್ತರದ ಏಕಶಿಲಾ ವಿಗ್ರಹದ ಪ್ರತಿಷ್ಠಾಪನಾ ಮಹೋತ್ಸವ ಮೇ 8ರಿಂದ 10ರವರೆಗೆ ಪಾಜಕ ಸಮೀಪದ ಕುಂಜಾರುಗಿರಿ ಬೆಟ್ಟದಲ್ಲಿ ನಡೆಯಲಿದೆ.
ರಥಬೀದಿಯಲ್ಲಿರುವ ಪಲಿಮಾರು ಮಠದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿ ಯಲ್ಲಿ ಪಲಿಮಾರು ಶ್ರೀಗಳು ಈ ವಿಷಯ ತಿಳಿಸಿದರು. ಪಾಜಕ, ಧ್ವೈತ ಸಿದ್ಧಾಂತದ ಸ್ಥಾಪಕರಾದ ಶ್ರೀಮಧ್ವಾಚಾರ್ಯರ ಜನ್ಮಸ್ಥಳ. ಅಲ್ಲೇ ಸಮೀಪ ದಲ್ಲಿರುವ ಕುಂಜಾರುಗಿರಿಬೆಟ್ಟ ಬಾಲಕ ವಾಸುದೇವ (ಮಧ್ವಾಚಾರ್ಯರ ಪೂರ್ವಾಶ್ರಮದ ಹೆಸರು) ಆಟವಾಡಿದ, ಓಡಾಡಿದ ಪ್ರದೇಶ.
ಕುಂಜಾರುಗಿರಿಯಲ್ಲಿ ಮಧ್ವಾಚಾರ್ಯರನ್ನು ಅನುಗ್ರಹಿಸಿದ ದುರ್ಗಾದೇವಿ ನೆಲೆಸಿದ್ದು, ಇಲ್ಲೇ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮಧ್ವಾಚಾರ್ಯರ ಭವ್ಯವ್ಯಕ್ತಿತ್ವವನ್ನು ನೆನಪಿಸುವ 32 ಅಡಿ ಎತ್ತರದ ಏಕಶಿಲಾ ಪ್ರತಿಮೆಯನ್ನು ಈಗಾಗಲೇ 40 ಅಡಿ ಎತ್ತರದ ವೇದಿಕೆಯಲ್ಲಿ ಎಂಟು ಅಡಿ ಎತ್ತರ ಪದ್ಮಪೀಠದ ಮೇಲೆ ಸ್ಥಾಪಿಸಲಾಗಿದೆ ಎಂದು ಪಲಿಮಾರು ಶ್ರೀಗಳು ತಿಳಿಸಿದರು.
ಏಕಶಿಲೆಯ ಮಧ್ವಾಚಾರ್ಯರ ಬೃಹತ್ ಪ್ರತಿಮೆಯನ್ನು ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಿ ಬೆಂಗಳೂರಿನ ಅಶೋಕ ಗುಡಿಗಾರ್ ಹಾಗೂ ಕುಮಾರ್ ಅವರು ನಿರ್ಮಿಸಿದ್ದಾರೆ. ಕಳೆದ ತಿಂಗಳು 32 ಅಡಿ ಎತ್ತರದ ಮೂರ್ತಿಯನ್ನು ಎಲ್‌ಎಂಡ್‌ಟಿ ಕಂಪೆನಿಯ ಬೃಹತ್ ಕ್ರೇನ್‌ಗಳ ಮೂಲಕ 40 ಅಡಿ ಎತ್ತರದ ಕಾಂಕ್ರಿಟ್ ವೇದಿಕೆ ಹಾಗೂ ಅದರ ಮೇಲೆ ಎಂಟು ಅಡಿ ಎತ್ತರದ ಪದ್ಮಪೀಠದ ಮೇಲೆ ನಿಲ್ಲಿಸಲಾಗಿದೆ. ಕೆಳಗಿನ ರಸ್ತೆಯಿಂದ ನೋಡುವಾಗ ಸುಮಾರು 100 ಅಡಿಗೂ ಅಧಿಕ ಎತ್ತರದಲ್ಲಿ ಮಧ್ವರ ಭವ್ಯವಿಗ್ರಹ ಮೋಹಕವಾಗಿ ಕಂಗೊಳಿಸುತ್ತಿದೆ ಎಂದು ಪಲಿಮಾರು ಶ್ರೀಗಳು ನುಡಿದರು.
ಇದೀಗ ಈ ಭವ್ಯವಿಗ್ರಹದ ಪ್ರತಿಷ್ಠಾ-ಬ್ರಹ್ಮಕಲಶೋತ್ಸವ ಮೇ 7ರಿಂದ 10ರವರೆಗೆ ನಡೆಯಲಿದೆ. ಶ್ರೀಮಧ್ವರು ಬದರಿಯನ್ನು ಪ್ರವೇಶಿಸಿ 700 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಮೂರ್ತಿಯ ಪ್ರತಿಷ್ಠಾಪನೆ ನಡೆಯುತ್ತಿದೆ. ಶಿಲ್ಪಶಾಸ್ತ್ರಕ್ಕೆ ಮಾದರಿಯಾದ 32 ಸಲ್ಲಕ್ಷಣಗಳಿಂದ ಕೂಡಿ ಈ ವಿಗ್ರಹವನ್ನು ನಿರ್ಮಿಸಲಾಗಿದೆ ಎಂದವರು ವಿವರಿಸಿದರು.
ಪ್ರತಿಷ್ಠೆ-ಬ್ರಹ್ಮಕಲಶ: ಮೇ 7ರಂದು ಸಂಜೆ 4ಕ್ಕೆ ಪಾಜಕ ಶ್ರೀಮಧ್ವಮಠದಿಂದ ಕುಂಜಾರುಗಿರಿಯವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ 5:30ಕ್ಕೆ ಸಂತ ಸಮ್ಮೇಳನ ನಡೆಯಲಿದೆ ಎಂದರು. ಮೇ 8ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಬೆಳಗ್ಗೆ 10:46ಕ್ಕೆ ಶ್ರೀಮಧ್ವಾಚಾರ್ಯರ ಪ್ರತಿಮೆಯ ಪ್ರತಿಷ್ಠಾಪನೆ ನಡೆಯಲಿದೆ. ಸಂಜೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೇ10ರಂದು ಬೆಳಗ್ಗೆ 8:55ಕ್ಕೆ ಆಚಾರ್ಯರ ವಿಗ್ರಹಕ್ಕೆ ಬ್ರಹ್ಮಕಲಶೋತ್ಸವ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಅದೇ ದಿನ ರಾತ್ರಿ ಮಧ್ವದೀಪೋತ್ಸವ ನಡೆಯಲಿದೆ ಎಂದು ಪಲಿಮಾರು ಶ್ರೀಗಳು ನುಡಿದರು.
ಈ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಕಡೆಗಳಿಂದ ಆಗಮಿಸುವ ಮಠಾಧಿಪತಿಗಳು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದು, ನಾಡಿನ ಅನೇಕ ಮಂದಿ ಸಚಿವರು, ಪ್ರಮುಖ ರಾಜಕಾರಣಿಗಳು ಪಾಲ್ಗೊಳ್ಳುವರು ಎಂದರು. ಪ್ರತಿದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ಸ್ವಾಮೀಜಿ ನುಡಿದರು.
ಮೂರ್ತಿ ಪ್ರತಿಷ್ಠಾಪನೆಗೊಂಡಿರುವ ಒಂದು ಎಕರೆ ಪ್ರದೇಶದಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸುವ ಯೋಜನೆ ಇದೆ. ಇದು ಒಟ್ಟು ಸುಮಾರು 1.5 ಕೋಟಿ ರೂ.ಗಳ ಯೋಜನೆಯಾಗಿದೆ ಎಂದು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ನುಡಿದರು.