ಟರ್ಕಿ: 4,000 ನಾಗರಿಕ ಸೇವಾ ಅಧಿಕಾರಿಗಳ ವಜಾ

Update: 2017-04-30 14:29 GMT

ಇಸ್ತಾಂಬುಲ್, ಎ. 30: ಟರ್ಕಿಯಲ್ಲಿ ಶನಿವಾರ ಎರಡು ನೂತನ ಆದೇಶಗಳನ್ನು ಹೊರಡಿಸಲಾಗಿದೆ. ಒಂದು ಆದೇಶವು 4,000ಕ್ಕೂ ಅಧಿಕ ನಾಗರಿಕ ಸೇವಾ ಅಧಿಕಾರಿಗಳನ್ನು ಉಚ್ಚಾಟಿಸಿದರೆ, ಇನ್ನೊಂದು ಟೆಲಿವಿಶನ್ ಡೇಟಿಂಗ್ ಕಾರ್ಯಕ್ರಮಗಳನ್ನು ನಿಷೇಧಿಸಿದೆ.

ಮೊದಲ ಆದೇಶದಲ್ಲಿ ಸಾವಿರಾರು ನಾಗರಿಕ ಅಧಿಕಾರಿಗಳನ್ನು ಉಚ್ಚಾಟಿಸಲಾಗಿದೆ. ಕೆಲಸದಿಂದ ವಜಾಗೊಂಡವರಲ್ಲಿ ಸುಮಾರು 500 ಶಿಕ್ಷಣವೇತ್ತರು ಹಾಗೂ 1,000ಕ್ಕೂ ಅಧಿಕ ಸೇನಾ ಸಿಬ್ಬಂದಿಯೂ ಸೇರಿದ್ದಾರೆ.
ಇದೇ ಆದೇಶವು 236 ಮಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದೆ.

ಎರಡನೆ ಆದೇಶವು ‘‘ಸ್ನೇಹಿತರು ಮತ್ತು ಸಂಗಾತಿಗಳನ್ನು ಹುಡುಕುವ’’ ರೇಡಿಯೊ ಮತ್ತು ಟಿವಿ ಕಾರ್ಯಕ್ರಮಗಳನ್ನು ನಿಷೇಧಿಸುತ್ತದೆ.
ಕಳೆದ ವರ್ಷದ ಕ್ಷಿಪ್ರಕ್ರಾಂತಿಯ ಬಳಿಕ ಟರ್ಕಿಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದ್ದು, ಆದೇಶಗಳ ಮೂಲಕ ದೇಶವನ್ನು ಆಳುವ ಅಧಿಕಾರವನ್ನು ಸರಕಾರಕ್ಕೆ ನೀಡಿದೆ.

ಅಂದಿನಿಂದ 47,000ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಸುಮಾರು 1,00,000 ಮಂದಿಯನ್ನು ಅವರ ಸರಕಾರಿ ನೌಕರಿಗಳಿಂದ ವಜಾಗೊಳಿಸಲಾಗಿದೆ.
ಅಮೆರಿಕದಲ್ಲಿ ನೆಲೆಸಿರುವ ಧರ್ಮ ಗುರು ಫತೇವುಲ್ಲಾ ಗುಲೇನ್ ಕ್ಷಿಪ್ರಕ್ರಾಂತಿಯ ರೂವಾರಿ ಎಂದು ಟರ್ಕಿ ಹೇಳಿದೆ. ಆದರೆ, ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News