ಸ್ತ್ರೀಶಕ್ತಿ ಗುಂಪಿನ ಸದಸ್ಯರಿಗೆ ಮಾಹಿತಿ ಕಾರ್ಯಾಗಾರ
ಉಡುಪಿ, ಎ.30: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಆರೋಗ್ಯ ಇಲಾಖೆಯಡಿ ಸರಕಾರ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಸ್ತ್ರೀ ಶಕ್ತಿ ಗುಂಪಿನ ಸದಸ್ಯರಿಗೆ ಮಾಹಿತಿ ನೀಡುವ ಕಾರ್ಯಗಾರವೊಂದು ಇತ್ತೀಚೆಗೆ ಉಡುಪಿ ತಾಪಂ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ ಮಾತನಾಡಿ, ಸರಕಾರ ಅನೇಕ ಜನಪರ ಆರೋಗ್ಯ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ, ತಳಮಟ್ಟದವರೆಗೆ ಅವುಗಳ ಬಗ್ಗೆ ಅರಿವನ್ನು ಮೂಡಿಸುವುದು ಕೇವಲ ಇಲಾಖೆಯಿಂದ ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಗುಂಪುಗಳು, ಯುವಕ ಮಂಡಲ ಗಳು ಹಾಗೂ ಎನ್‌ಜಿಒಗಳ ಸಕ್ರಿಯ ಪಾಲುದಾರಿಕೆ ಅತ್ಯಗತ್ಯ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀರಾಮರಾವ್ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವಿಶೇಷ ವಾಗಿ ವಾಜಪೇಯಿ ಆರೋಗ್ಯಶ್ರೀ, ರಾಜೀವ ಗಾಂಧಿ ಆರೋಗ್ಯ ಭಾಗ್ಯ, ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ, ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆ ಹಾಗೂ ಜನರಿಕ್ ಔಷಧ ಮಳಿಗೆಗಳ ಬಗ್ಗೆ ವಿಶೇಷ ಒತ್ತನ್ನು ನೀಡಿ ಹೆಚ್ಚಿನ ಜನ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅರಿವು ಮೂಡಿಸಲು ತಿಳಿಸಿದರು.