ಪುಣ್ಯಕೋಟಿ ಗೋಸೇವಾ ಬಳಗದ 20ನೇ ಗೋಪೂಜೆ
ಉಡುಪಿ, ಎ.30: ಇಲ್ಲಿನ ಪುಣ್ಯಕೋಟಿ ಗೋಸೇವಾ ಬಳಗದ ತಿಂಗಳ ಗೋಪೂಜೆಯ ಅಂಗವಾಗಿ 20ನೇ ಗೋಪೂಜೆಯು ಉಡುಪಿ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿಯ ಸಹಯೋಗದಲ್ಲಿ ಬೈಲೂರಿನ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.
ಗೋಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಪ್ರಮುಖ್ ಪಿ.ಎ.ಪ್ರಕಾಶ್ ಉದ್ಘಾಟಿಸಿ ದರು. ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿರುವ ಗೋವುಗಳ ರಕ್ಷಣೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದೋತ್ಸವ ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಲೂರು ಶ್ರೀಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಶೆಟ್ಟಿ, ಉಡುಪಿ ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ನಗರಸಭೆಯ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ದೇವಳದ ಪವಿತ್ರಪಾಣಿ ಶ್ರೀನಿವಾಸ ಆಚಾರ್ಯ ಭಾಗವಹಿಸಿದ್ದರು.
ಪುಣ್ಯಕೋಟಿ ಗೋಸೇವಾ ಬಳಗದ ಅಧ್ಯಕ್ಷೆ ಯಶೋಧಾ ಬಂಟ್ವಾಳ್ ಗೋಪೂಜೆಯನ್ನು ನಡೆಸಿದರು. ಬಳಗದ ಸ್ಥಾಪಕಾಧ್ಯಕ್ಷೆ ಜ್ಯೋತಿ ಎಸ್ ದೇವಾಡಿಗ ಪ್ರಾಸ್ತಾವಿಕ ಮಾತುಗಳಾಡಿದರು. ಸರೋಜಾ ಯಶವಂತ್ ಸ್ವಾಗತಿಸಿ, ತಾರಾ ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಶೆಟ್ಟಿ ವಂದಿಸಿದರು.