ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಮಾತನಾಡುವ ಅಧಿಕಾರ ಬಿಜೆಪಿಯರಿಗಿಲ್ಲ: ದೊಡ್ಡಯ್ಯ ಆನೆಕಲ್

Update: 2017-04-30 14:36 GMT

ಉಡುಪಿ, ಎ.30: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜಕೀಯೇತರವಾದ ಸಮಾನ ಮನಸ್ಕರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಯಾಗಿದೆ. ಬಿಜೆಪಿ ಪಕ್ಷಕ್ಕೂ ಈ ಸಂಘಟನೆಗೂ ಯಾವುದೇ ಸಂಬಂಧವಿಲ್ಲ. ನಮ್ಮ ಸಂಘಟನೆ ಬಗ್ಗೆ ಮಾತನಾಡುವ ಅಧಿಕಾರ ಬಿಜೆಪಿ ನಾಯಕರಿಗೆ ಇಲ್ಲ ಎಂದು ಬ್ರಿಗೇಡ್‌ನ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಯ್ಯ ಆನೆಕಲ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಜಿಸ್ಟ್ರೇಶನ್ ಆಗಿರುವ ಈ ಸಂಘಟನೆಯಲ್ಲಿ ಈಶ್ವರಪ್ಪ ಅವರಿಗೆ ಯಾವುದೇ ಪದವಿ ಇಲ್ಲ. ಅವರು ನಮ್ಮ ಮಾರ್ಗದರ್ಶಕರು. ಕರೆದಾಗ ಬಂದು ಮಾರ್ಗ ದರ್ಶನ ನೀಡುತ್ತಾರೆ. ಈ ಸಂಘಟನೆಗೆ ಅವರ ನೇತೃತ್ವ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗೆ ಅವಕಾಶವಿಲ್ಲ ಮತ್ತು ಪಕ್ಷದ ನಾಯಕರು ಆ ಸಂಘಟನೆಗಳಲ್ಲಿ ಗುರುತಿಸಿಕೊಳ್ಳಬಾರದು ಎಂದು ಹೇಳುವ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ಆಂಧ್ರಪ್ರದೇಶದಲ್ಲಿ 20 ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಆ ಸಂಘಟನೆಗಳಿಂದ ಹೊರಗೆ ಬರುತ್ತಾರೆಯೇ ಎಂದು ಅವರು ಪ್ರಶ್ನಿಸಿದರು. ಹೆಚ್ಚಿನ ರಾಜಕೀಯ ನಾಯಕರು ಒಂದಲ್ಲ ಒಂದು ಸಂಘಟನೆಗಳಲ್ಲಿ ಗುರು ತಿಸಿಕೊಂಡಿದ್ದಾರೆ. ಇದು ಅವರವರ ಸ್ವಇಚ್ಛೆಗೆ ಬಿಟ್ಟದ್ದು. ಅದನ್ನು ಯಾರು ಕೂಡ ಹೇಳಬಾರದು. ಸಂಘಟನೆಗಳಿಗೆ ಹೋಗಬಾರದು ಎಂಬುದಾಗಿ ಯಾರು ಕೂಡ ಒತ್ತಡ ಹಾಕುವಂತಿಲ್ಲ. ಮುಂದೆ ಕೂಡ ಈಶ್ವರಪ್ಪರನ್ನು ಸಂಘಟನೆಗೆ ಕರೆಯುತ್ತೇವೆ. ಬರುವುದು ಬಿಡುವುದು ಅವರಿಗೆ ಬಿಟ್ಟು ವಿಚಾರ ಎಂದು ಅವರು ತಿಳಿಸಿದರು.

ಸದ್ಯಕ್ಕೆ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಸಂಘಟನೆಗಳನ್ನು ಮಾಡಲಾಗುತ್ತಿದೆ. ಅದರೊಂದಿಗೆ ಯುವ ಹಾಗೂ ಮಹಿಳಾ ಘಟಕಗಳನ್ನು ಕೂಡ ಸ್ಥಾಪಿಸಲಾಗು ವುದು. ಉಡುಪಿಯಲ್ಲಿ ಸಂಘಟನೆ ರಚಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದ ಅವರು, ಇದು ಹಿಂದುಳಿದವರ್ಗ ಮತ್ತು ದಲಿತರ ಧ್ವನಿಯಾಗಿರುವ ಸಂಘಟನೆಯಾಗಿದೆ. ಎಲ್ಲ ಪಕ್ಷದ ಕಾರ್ಯಕರ್ತರು ನಮ್ಮ ಪಕ್ಷದಲ್ಲಿದ್ದಾರೆ ಎಂದರು.

ಸಂಘಟನೆಯ ವತಿಯಿಂದ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ರಾಜ್ಯದ 5200 ಕಾಲೇಜುಗಳ ತಲಾ ಇಬ್ಬರು ವಿದ್ಯಾರ್ಥಿಗಳಂತೆ ಒಟ್ಟು 10,000 ಮಂದಿಗೆ ಆರ್ಥಿಕ ನೆರವು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಮಳ್ಳೂರು, ಆನಂದ ಶೇಟ್, ರಾಜ್ಯ ಉಪಾಧ್ಯಕ್ಷ ಮಹೇಶ್ ಪೂಜಾರಿ, ಚೇತನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News