ಪ್ರತಿ ಠಾಣೆಯಲ್ಲಿ ದಲಿತ ಕುಂದು ಕೊರತೆ ಸಭೆಗೆ ಡಿಸಿಪಿ ಸೂಚನೆ

Update: 2017-04-30 15:41 GMT

ಮಂಗಳೂರು, ಎ. 30: ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದಲಿತರ ಕುಂದು-ಕೊರತೆ ಸಭೆಯು ಡಿಸಿಪಿಗಳಾದ ಶಾಂತರಾಜು ಹಾಗೂ ಡಾ. ಸಂಜೀವ ಪಾಟೀಲ್ ಅವರ ನೇತೃತ್ವದಲ್ಲಿ ರವಿವಾರ ನಡೆಯಿತು.

 ದಲಿತ ಮುಖಂಡ ಮುಖೇಶ್ ಅವರು ಮಾತನಾಡಿ, ಮಂಗಳೂರು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಜನವರಿ ತಿಂಗಳಿಂದಲೂ ದಲಿತರ ಕುಂದು-ಕೊರತೆ ಸಭೆಯನ್ನು ನಡೆಸಲಾಗಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಡಿಸಿಪಿ ಶಾಂತರಾಜು ಅವರು, ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪ್ರತಿ ಪೊಲೀಸ್ ಠಾಣೆಗಳಲ್ಲಿ ಪ್ರತೀ ತಿಂಗಳೂ ಕಡ್ಡಾಯವಾಗಿ ದಲಿತ ಕುಂದು ಕೊರತೆ ಸಭೆಯನ್ನು ನಡೆಸಬೇಕು. ಇದೇ ಸಂದರ್ಭದಲ್ಲಿ ಅವರು ದಲಿತರ ಕುಂದು-ಕೊರತೆ ಸಭೆಯನ್ನು ಏರ್ಪಡಿಸಲು ಆದೇಶಿಸಿದರು.

ಚೆಂಬುಗುಡ್ಡೆಯ ಸಮೀಪದ ಸರಕಾರಿ ಜಾಗವನ್ನು ಪಡೆಯಲು ಅರ್ಜಿ ಹಾಕಲಾಗಿದೆ. ಆದರೆ, ಸ್ಥಳೀಯರಿಂದ ತೊಂದರೆಗಳಾಗುತ್ತಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ತನ್ನ ಗಂಡ ಕೂಡಾ ಮನೆಗೆ ಬರುತ್ತಿಲ್ಲ. ಈ ಬಗ್ಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ಪ್ರಕರಣದ ಕುರಿತಂತೆ ಎಸಿಪಿ ಶೃತಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿ ಮಾಹಿತಿಗಳಿದ್ದಲ್ಲಿ ಅವರಿಗೆ ಸೂಚಿಸಬಹುದು ಎಂದು ಡಿಸಿಪಿ ಶಾಂತರಾಜು ಹೇಳಿದರು.

ಬಂದರು ಠಾಣಾ ಇನ್ಸ್‌ಪೆಕ್ಟರ್ ಶಾಂತರಾಮ ಸ್ವಾಗತಿಸಿ, ಸುರತ್ಕಲ್ ಠಾಣಾ ಇನ್ಸ್‌ಸ್ಪೆಕ್ಟರ್ ಚೆಲುವರಾಜ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News