ಪುತ್ತೂರು ಕ್ರೀಡಾಂಗಣಕ್ಕೆ ರೂ. 6 ಕೋಟಿ ಮಂಜೂರು : ಶಕುಂತಳಾ ಶೆಟ್ಟಿ

Update: 2017-04-30 16:22 GMT

ಪುತ್ತೂರು,ಎ.30: ತಾಲೂಕು ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲು ರೂ. 14.50 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಈ ಪೈಕಿ ರೂ. 6 ಕೋಟಿ ಮಂಜೂರುಗೊಂಡಿದೆ. ಕಾಮಗಾರಿಯನ್ನು ಶೀಘ್ರವಾಗಿ ಆರಂಬಿಸಲಾಗುವುದು ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು. ಅವರು ಭಾನುವಾರ ಸುದ್ದಿ ಬಿಡುಗಡೆ ಮತ್ತು ವಿವಿಧ ಸರ್ಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಇಲ್ಲಿನ ಸಂತ ಫಿಲೋಮಿನಾ ಕಾಲೇಜ್‌ನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘ಬಾಂಧವ್ಯ ಟ್ರೋಫಿ-2017’ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವತ್ತೂ ಒತ್ತಡದಲ್ಲಿ ಜನಸೇವೆ ಮಾಡುತ್ತಿರುವ ಪೊಲೀಸರು, ವಕೀಲರು, ಕಂದಾಯ ಅಧಿಕಾರಿಗಳು, ಪತ್ರಕರ್ತರು ಇನ್ನಿತರ ಇಲಾಖೆಯವರು ಸೇರಿಕೊಂಡು ಕ್ರೀಡಾಕೂಟವನ್ನು ನಡೆಸುವ ಮೂಲಕ ಅನ್ಯೋನ್ಯತೆ ಮತ್ತು ಸೌಹಾರ್ಧತೆಗೆ ಮಾದರಿಯಾಗಿದ್ದಾರೆ. ಈ ಮಾದರಿಯನ್ನು ಎಲ್ಲರೂ ತಮ್ಮ ಬದುಕಿನಲ್ಲಿಯೂ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಪುತ್ತೂರು ಡಿವೈಎಸ್‌ಪಿ ಭಾಸ್ಕರ ರೈ ಮಾತನಾಡಿ ಪತ್ರಕರ್ತರು ಮತ್ತು ಇಲಾಖೆಯ ಅಧಿಕಾರಿಗಳು ಜನರೊಂದಿಗೆ ಬೆರೆತು ಆತ್ಮೀಯತೆ ಬೆಳೆಸುವಲ್ಲಿ ಹಾಗೂ ಸೌಹಾರ್ಧತೆ ಕಾಪಾಡಿಕೊಳ್ಳುವಲ್ಲಿ ಇಂತಹ ಕ್ರೀಡಾಕೂಟ ಸಹಕಾರಿಯಾಗಲಿದೆ. ಕ್ರೀಡಾಕೂಟ ಸುಭದ್ರತೆಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯ ಮಹಮ್ಮದ್ ಆಲಿ, ಸುದ್ದಿ ಬಿಡುಗಡೆಯ ಸಂಪಾದಕ ಡಾ. ಯು.ಪಿ. ಶಿವಾನಂದ, ಶೋಭಾ ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆ ತಂಡ, ಮೆಸ್ಕಾಂ ಇಲಾಖೆ ತಂಡ, ವಕೀಲರ ತಂಡ ‘ಎ’ ಮತ್ತು ‘ಬಿ’, ಸಂತ ಫಿಲೋಮಿನಾ ಕಾಲೇಜು ಶಿಕ್ಷಕರ ತಂಡ, ವಿವೇಕಾನಂದ ಕಾಲೇಜು ಶಿಕ್ಷಕರ ತಂಡ, ಸುದ್ದಿ ಬಿಡುಗಡೆ ಪುತ್ತೂರು ಮತ್ತು ಸುಳ್ಯ ತಂಡ, ಅರಣ್ಯ ಇಲಾಖೆ ತಂಡ, ದೈಹಿಕ ಶಿಕ್ಷಣ ಶಿಕ್ಷಕರ ತಂಡ, ಸಹಾಯಕ ಆಯುಕ್ತರ ತಂಡ, ಮಂಗಳೂರಿನ ನಮ್ಮ ಟಿವಿ ತಂಡ, ವಿ4 ನ್ಯೂಸ್ ಚಾನೆಲ್ ತಂಡ, ಉಡುಪಿ ಪ್ರೆಸ್ ಕ್ಲಬ್ ತಂಡ, ಸಹಕಾರಿ ಬ್ಯಾಕ್ ತಂಡ ಮತ್ತು ಪುತ್ತೂರು ಪ್ರೆಸ್ ಕ್ಲಬ್ ತಂಡ ಪಂದ್ಯಾಟದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News