ಜಮಾಲಾಬಾದ್ ಗಡ ರಸ್ತೆಯ ಸೂಚನಾಫಲಕ ವಿರೂಪ

Update: 2017-04-30 16:35 GMT

ಬೆಳ್ತಂಗಡಿ, ಎ.30: ತಾಲೂಕಿನ ಜಮಾಲಾಬಾದ್ ಗಡ ಗಡಾಯಿಕಲ್ಲಿಗೆ ಹೋಗುವ ರಸ್ತೆ ಸೂಚಕ ಫಲಕಗಳಿಗೆ ಯಾರೋ ಕಿಡಿಗೇಡಿಗಳು ಮಸಿ ಬಳಿದಿದ್ದು ಅದರ ಮೇಲೆ ‘ನರಸಿಂಹ ಗಡ’ ಎಂಬ ಬರಹವನ್ನು ಬರೆಯಲಾಗಿದೆ ಎಂದು ತಿಳಿದು ಬಂದಿದೆ.

ನಡ ಗ್ರಾಮದ ಮಂಜೊಟ್ಟಿ ಎಂಬಲ್ಲಿಂದ ಗಡಾಯಿ ಕಲ್ಲಿಗೆ ಹೋಗುವ ದಾರಿಯಲ್ಲಿರುವ ಜಮಾಲಾಬಾದಿಗೆ ತಿರುಗುವ ರಸ್ತೆಗೆ ಅಳವಡಿಸಲಾಗಿರುವ ಲೋಕೋಪಯೋಗಿ ಇಲಾಖೆಯ ರಸ್ತೆ ಸೂಚಕ ಫಲಕದಲ್ಲಿ ಜಮಾಲಾಬಾದ್ ಗಡ ಎಂದು ಬರೆದಿರುವುದನ್ನು ಕಪ್ಪುಮಸಿಯಿಂದ ಅಳಿಸಿ ಅಲ್ಲಿ ‘ನರಸಿಂಗ ಗಡ’ ಎಂದು ಬರೆಯಲಾಗಿದೆ ಎನ್ನಲಾಗಿದೆ. ಅದೇರೀತಿ ಅಲ್ಲಿಯೇ ಇರುವ ಮೈಲು ಕಲ್ಲಿನ ಮೇಲೂ ಜಮಾಲಾಬಾದ್ ಎಂಬುದನ್ನು ಅಳಿಸಿ ‘ನರಸಿಂಹ ಗಡ’ ಎಂದು ಬರೆಯಲಾಗಿದೆ. ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗದ ನಾಮ ಫಲಕವನ್ನೂ ವಿರೂಪ ಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. 

ಅತ್ಯಂತ ವ್ಯವಸ್ಥಿತವಾಗಿ ದುಷ್ಕರ್ಮಿಗಳ ತಂಡ ಈ ಫಲಕಗಳನ್ನು ಅಳಿಸಿ ಅಲ್ಲಿ ನರಸಿಂಹ ಗಡ ಎಂದು ಬರೆದಿದೆ ಎನ್ನಲಾಗಿದ್ದು, ಟಿಪ್ಪುಸುಲ್ತಾನ್ ಕಟ್ಟಿರುವ ಜಮಾಲಾಬಾದ್‌ಕೋಟೆ ಇದೀಗ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೆಸರು ಗಳಿಸಿದೆ. ಇದರ ಹೆಸರನ್ನು ‘ನರಸಿಂಹ ಗಡ’ ಎಂದು ಬದಲಿಸಬೇಕು ಎಂದು ಸಂಘ ಪರಿವಾರ ಒತ್ತಾಯ ಮಾಡುತ್ತಿತ್ತು ಎಂದು ತಿಳಿದು ಬಂದಿದೆ. ಆದರೆ ಸರಕಾರ ಇದಕ್ಕೆ ಮಹತ್ವ ನೀಡಿರಲಿಲ್ಲ. ಈ ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ತಡರಾತ್ರಿಈ ಕಾರ್ಯವನ್ನು ಮಾಡಲಾಗಿದ್ದು, ಇದರ ಹಿಂದೆ ಯಾವುದೋ ಕಿಡಿಗೇಡಿಗಳ ಗುಂಪು ಕಾರ್ಯ ನಿರ್ವಹಿಸಿದೆ ಎಂದು ತಿಳಿದು ಬಂದಿದೆ.

ಟಿಪ್ಪುಸುಲ್ತಾನ್ ತಾಯಿಯ ಹೆಸರನ್ನು ಆತ ತಾನು ಕಟ್ಟಿದ ಕೋಟೆಗೆ ಇಟ್ಟಿದ್ದು, ಅದನ್ನು ಅಳಿಸಿ ಹಾಕಲು ಈ ಹಿಂದೆಯೂ ಪ್ರಯತ್ನಗಳು ನಡೆದಿದ್ದವು. ಆದರೆ ಅದು ಯಶಸ್ವಿಯಾಗಿರಲಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News