ರದ್ದಾದ 500, 1000 ರೂ. ನೋಟುಗಳು ಏನಾಗುತ್ತಿವೆ ನೋಡಿ

Update: 2017-04-30 17:47 GMT

  ಅಹ್ಮದಾಬಾದ್,ಎ.30: ಕಳೆದ ವರ್ಷದ ನ.8ರಂದು ಪ್ರಧಾನಿ ನರೇಂದ್ರ ಮೋದಿಯವರು 500 ಮತ್ತು 1,000 ರೂ.ನೋಟುಗಳನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿ ಆರು ತಿಂಗಳು ಗಳು ಸರಿದಿವೆ. ಇದೀಗ ಅಹ್ಮದಾಬಾದ್‌ನಲ್ಲಿರುವ ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್‌ಐಡಿ) ಯು ಅತ್ಯಂತ ವಿಶಿಷ್ಟ ವಿಧಾನಗಳ ಮೂಲಕ ಈ ರದ್ದಾದ ನೋಟುಗಳಿಂದ ಉಪಯಕ್ತ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ.

ಈ ನೋಟು ತ್ಯಾಜ್ಯಗಳನ್ನು ಪುನರ್ಬಳಕೆಗೆ ಸಜ್ಜಾಗಿಸಿ ಅವುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುವ ನಿಟ್ಟಿನಲ್ಲಿ ಎನ್‌ಐಡಿ ವಿದ್ಯಾರ್ಥಿಗಳು ಹೊಸ ಹೊಸ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

 ಎನ್‌ಐಡಿಗೆ ಈ ಯೋಜನೆಯನ್ನು ಒಪ್ಪಿಸಿರುವ ಆರ್‌ಬಿಐ ಈ ಹಳೆಯ ನೋಟು ಗಳನ್ನು ಒತ್ತಡಕ್ಕೊಳಪಡಿಸಿ ಅವುಗಳಿಗೆ ಇಟ್ಟಿಗೆಯಂತಹ ರೂಪವನ್ನು ನೀಡಿದ್ದು, ಸುಮಾರು 200 ಕೆ.ಜಿ.ಗಳಷ್ಟು ಇಂತಹ ಇಟ್ಟಿಗೆಗಳನ್ನು ಕಳುಹಿಸಿಕೊಟ್ಟಿದೆ.

ಈ ನೋಟುಗಳನ್ನು ಬಳಸಿ ಉಪಯುಕ್ತ ವಿನ್ಯಾಸವೊಂದನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾದರೆ ಈ ವಿದ್ಯಾರ್ಥಿಗಳು 50,000 ರೂ., 75,000 ರೂ. ಮತ್ತು 100,000 ರೂ.ಗಳ ಬಹುಮಾನಗಳನ್ನೂ ಪಡೆಯಲಿದ್ದಾರೆ. ಸಂಸ್ಥೆಯು ಮೇ ಅಂತ್ಯದ ವೇಳೆಗೆ ಅಖಿಲ ಭಾರತ ಸ್ಪರ್ಧೆಯೊಂದನ್ನು ನಡೆಸಲಿದೆ ಎಂದು ಪೀಠೋಪಕರಣ ಮತ್ತು ಒಳಾಂಗಣ ವಿನ್ಯಾಸ ಕೋರ್ಸ್‌ನ ಸಮನ್ವಯ ಕಾರರಾಗಿರುವ ಪ್ರವೀಣಸಿನ್ಹ ಸೋಲಂಕಿ ಅವರು ತಿಳಿಸಿದರು.

 ಈ ಕರೆನ್ಸಿ ನೋಟುಗಳು ಈಗ ರದ್ದುಗೊಂಡು ಗುಜರಿಯಾಗಿವೆ. ನಾವು ಇವುಗಳನ್ನು ಪುನರ್ಬಳಕೆಗೆ ಅಣಿಗೊಳಿಸಬೇಕೆಂದು ಸರಕಾರವು ಬಯಸಿದೆ. ಈ ನೋಟುಗಳನ್ನು ವಿನ್ಯಾಸಗೊಳಿಸುವಲ್ಲಿ ಸಾಕಷ್ಟು ಸಮಯದ ಜೊತೆಗೆ ಕಾಗದ ಮತ್ತು ಮುದ್ರಣ ಸಾಮಗ್ರಿಗಳು ವ್ಯಯವಾಗಿರುವುದರಿಂದ ನಾವು ಈ ಸಂಪನ್ಮೂಲವನ್ನು ನಿರರ್ಥಕ ಗೊಳಿಸಬಾರದು ಎನ್ನುವುದು ಸರಕಾರದ ಅಭಿಪ್ರಾಯವಾಗಿದೆ ಎಂದು ಅವರು ಹೇಳಿದರು.

ಈ ನೋಟುಗಳಿಂದ ಯಾವ ಬಗೆಯ ಉತ್ಪನ್ನಗಳು ಸಾಧ್ಯ ಎನ್ನುವುದನ್ನು ಹೇಳಲು ಕಾಲವಿನ್ನೂ ಪಕ್ವವಾಗಿಲ್ಲ ಎಂದ ಸೋಲಂಕಿ, ಪುನರ್ಬಳಕೆಯ ಈ ಉಪಕ್ರಮವು ಹಸಿರು ಭವಿಷ್ಯವನ್ನು ಹೊಂದುವಲ್ಲಿ ನೆರವಾಗಲು ಇತರರಿಗೆ ಸ್ಫೂರ್ತಿ ನೀಡುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News