ರಾಜಸ್ಥಾನ: ಐದು ವರ್ಷಗಳಲ್ಲಿ 23 ಲಕ್ಷ ಗರ್ಭಿಣಿಯರು 'ನಾಪತ್ತೆ'!
ಜೈಪುರ, ಮೇ 1: ಶೀರ್ಷಿಕೆ ನೋಡಿ ದಂಗಾಗಬೇಡಿ. ರಾಜಸ್ಥಾನದಲ್ಲಿ 2011ರಿಂದ 2016ರ ನಡುವೆ 23 ಲಕ್ಷ ಗರ್ಭಿಣಿಯರು 'ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ನೋಂದಣಿಯಾದ ಗರ್ಭಿಣಿಯರ ಸಂಖ್ಯೆಗೂ ಸಾಂಸ್ಥಿಕ ಹೆರಿಗೆಯಾದ ಮಹಿಳೆಯರ ಸಂಖ್ಯೆಗೂ ಅಜ ಗಜಾಂತರ ವ್ಯತ್ಯಾಸವಿದೆ ಎನ್ನುವುದನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ. ಅಂದರೆ ವಾಸ್ತವವಾಗಿ ಗರ್ಭಿಣಿಯರು ನಾಪತ್ತೆಯಾಗಿರುವುದು ಸರಕಾರಿ ಕಡತಗಳಿಂದ.
ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ ನೋಂದಣಿಯಾದ ಗರ್ಭಿಣಿಯರ ಸಂಖ್ಯೆಗೂ ಸಾಂಸ್ಥಿಕ ಹೆರಿಗೆಯಾದ ಮಹಿಳೆಯರ ಸಂಖ್ಯೆಗೂ ಅಜ ಗಜಾಂತರ ವ್ಯತ್ಯಾಸವಿದೆ ಎನ್ನುವುದನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.
ಇದರಿಂದಾಗಿ 23 ಲಕ್ಷ ಮಹಿಳೆಯರ ಆರೋಗ್ಯದ ಅಂಶಗಳ ಬಗ್ಗೆ ಜಾಡು ಹಿಡಿಯುವುದು ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆಕ್ಷೇಪಿಸಿದ್ದಾರೆ. ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಹೆರಿಗೆ ಸಾವು ಸಂಭವಿಸಲು ಮತ್ತು ಶಿಶು ಮರಣ ಪ್ರಮಾಣ ಹೆಚ್ಚಲು, ಸರಕಾರದ ವೈಫಲ್ಯವೇ ಕಾರಣ ಎಂದು ವರದಿ ಹೇಳಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯ ಸಾಧನೆ ಪರಿಶೀಲನಾ ವರದಿಯಲ್ಲಿ ಈ ಅಂಶವನ್ನು ವಿವರಿಸಲಾಗಿದೆ.
ಕೇಂದ್ರ ಸರಕಾರ 2005ರಲ್ಲಿ ಚಾಲನೆ ನೀಡಿದ ಈ ಯೋಜನೆಯಡಿ, ಶಿಶುಗಳ ಹಾಗೂ ಹೆರಿಗೆ ಅವಧಿಯಲ್ಲಿ ಮಹಿಳೆಯರ ಸಾವನ್ನು ಕಡಿಮೆ ಮಾಡುವುದು ಹಾಗೂ ಗ್ರಾಮೀಣ ಜನರ ಸಾಮಾನ್ಯ ಆರೋಗ್ಯ ಸುಧಾರಿಸುವ ಉದ್ದೇಶ ಹೊಂದಲಾಗಿದೆ.
ಐದು ವರ್ಷಗಳ ಅವಧಿಯಲ್ಲಿ 95 ಲಕ್ಷ ಗರ್ಭಿಣಿಯರು ಪ್ರಸವಪೂರ್ವ ನೋಂದಣಿ ಮಾಡಿಸಿಕೊಂಡಿದ್ದರೆ, ರಾಜ್ಯದಲ್ಲಿ ಈ ಅವಧಿಯಲ್ಲಿ 67 ಲಕ್ಷ ಮಹಿಳೆಯರು ಮಾತ್ರ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ. 5.08 ಲಕ್ಷ ಹೆರಿಗೆಗಳು ಮನೆಗಳಲ್ಲಿ ತರಬೇತಿ ಇಲ್ಲದ ದಾದಿಯರ ನೆರವಿನೊಂದಿಗೆ ಅಥವಾ ಸಂಬಂಧಿಕರ ನೆರವಿನೊಂದಿಗೆ ನಡೆದಿವೆ ಎಂದು ಅಂಕಿ ಅಂಶ ಹೇಳುತ್ತದೆ. ಆದರೆ 23 ಲಕ್ಷ ಮಹಿಳೆಯರ ಬಗ್ಗೆ ಯಾವ ಮಾಹಿತಿಯೂ ಇಲ್ಲ.
ಸಾಂಸ್ಥಿಕ ಹೆರಿಗೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಸರಕಾರ ಹೇಳಿಕೊಂಡಿದ್ದರೂ, ವಾಸ್ತವವಾಗಿ, ಈ ಪ್ರಮಾಣ ಐದು ವರ್ಷಗಳ ಅವಧಿಯಲ್ಲಿ ಶೇಕಡ 75 ರಿಂದ ಶೇಕಡ 78ರ ಆಸುಪಾಸಿನಲ್ಲೇ ಸ್ಥಗಿತವಾಗಿದೆ ಎಂದು ವರದಿ ಹೇಳಿದೆ.