ಮೋಹದ ಬಲೆಗೆ ಬಿದ್ದ ಗುಜರಾತ್ ನ ಬಿಜೆಪಿ ಸಂಸದ
ಹೊಸದಿಲ್ಲಿ, ಮೇ 1: ಘಾಝಿಯಾಬಾದ್ ನಲ್ಲಿ ಮಹಿಳೆಯೊಬ್ಬಳು ಗುಜರಾತ್ ನ ಬಿಜೆಪಿ ಸಂಸದರೊಬ್ಬರನ್ನು ಮೋಹದ ಬಲೆಗೆ (ಹನಿಟ್ರ್ಯಾಪ್) ಬೀಳಿಸಿ ಐದು ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆಯಿಂದ ತೊಂದರೆಗೊಳಗಾಗಿರುವ ವಲ್ಸಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಕೆ.ಸಿ ಪಟೇಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮೋಹದ ಬಲೆಗೆ ವಿಐಪಿಗಳನ್ನು ಬೀಳಿಸಿ ಅವರಿಂದ ಕೋಟಿಗಟ್ಟಲೆ ಹಣ ದೋಚುವ ಗ್ಯಾಂಗ್ ನ್ನು ಕಟ್ಟಿಕೊಂಡಿರುವ ಮಹಿಳೆ ತನಗೆ ಸಹಾಯ ಮಾಡುವಂತೆ ಬಿಜೆಪಿಯ ಸಂಸದ ಕೆ.ಸಿ ಪಟೇಲ್ರನ್ನು ಘಾಝಿಯಾಬಾದ್ ನ ಮನೆಗೆ ಕರೆಸಿದ್ದಳು ಎಂದು ತಿಳಿದು ಬಂದಿದೆ.
ಕೆ.ಸಿ ಪಟೇಲ್ ಮನೆಗೆ ತಲುಪಿದಾಗ ಅವರಿಗೆ ಮಹಿಳೆ ಮತ್ತು ಬರಿಸುವ ಜ್ಯೂಸ್ ಕುಡಿಸಿದಳು. ಪ್ರಜ್ಞೆ ತಪ್ಪಿದ ಸಂಸದನಿಗೆ ಗೊತ್ತಾಗದಂತೆ ಅವರ ಜೊತೆ ಆಕ್ಷೇಪಾರ್ಹ ಫೋಟೋಗಳನ್ನು ಮಹಿಳೆ ಬಳಿಕ ತೆಗೆಸಿಕೊಂಡಳು ಎನ್ನಲಾಗಿದೆ. ಬಳಿಕ ಎಚ್ಚರವಾದಾಗ ಸಂಸದನಿಗೆ ತಾನು ಮಹಿಳೆಯ ಮೋಹದ ಬಲೆಗೆ ಬಿದ್ದ ವಿಚಾರ ಗೊತ್ತಾಯಿತು. ಪೋಟೋಗಳನ್ನು ತೋರಿಸಿ ಬ್ಲಾಕ್ ಮೇಲ್ ಮಾಡಲು ಇಳಿದ ಮಹಿಳೆ ತನಗೆ ಒಳ್ಳೆಯ ಉದ್ಯೋಗ ಅಥವಾ ಐದು ಕೋಟಿ ರೂ. ಹಣ ನೀಡದಿದ್ದರೆ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡುವುದಾಗಿ ಸಂಸದನಿಗೆ ಮಹಿಳೆ ಬೆದರಿಕೆ ಹಾಕಿದಳು ಎನ್ನಲಾಗಿದೆ.
ಮಹಿಳೆಯ ಮೋಹದ ಬಲೆಯಿಂದ ಹೇಗೊ ತಪ್ಪಿಸಿಕೊಂಡ ಬಂದ ಸಂಸದ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.ಭಾರೀ ಮೊತ್ತದ ಹಣ ನೀಡುವಂತೆ ಒತ್ತಾಯಿಸಿ ಸಂಸದರನ್ನು ಬ್ಲಾಕ್ ಮಾಡಲು ಯತ್ನಿಸಿದ ಮಹಿಳೆ ಮತ್ತು ಆಕೆಯ ತಂಡವನ್ನು ಬಂಧಿಸಲು ಪೊಲೀಸರು ಬಲೆ ಬೀಳಿಸಿದ್ದಾರೆ. ಇದೇ ಮಹಿಳೆ ಕಳೆದ ವರ್ಷ ಇನ್ನೊರ್ವ ಸಂಸದನ್ನು ಇದೇ ರೀತಿ ಮೋಹದ ಬಲೆಗೆ ಬೀಳಿಸಿ ಆತನಿಂದ ಭಾರೀ ಮೊತ್ತದ ಹಣ ಪಡೆಯಲು ಯತ್ನಿಸಿದ್ದಳು ಎಂದು ತಿಳಿದು ಬಂದಿದೆ.